ರಾಜ್ಯಪಾಲರ ಶೋಕಾಸ್‌ ನೋಟಿಸ್‌’ಗೆ ಹೆದರಲ್ಲ : ಸಿಎಂ

 ಮೈಸೂರು: 

    ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ನೀಡಿರುವುದು ಹಾಗೂ ಅದಕ್ಕೆ ಡಿಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವರ್ಸಸ್ ರಾಜಭವನದ ನಡುವೆ ಸಂಘರ್ಷದ ವಾತಾವರಣವನ್ನು ಸೃಷ್ಟಿ ಮಾಡಿದೆ.

   ಈ ಬೆಳವಣಿಗೆ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ರಾಜ್ಯಪಾಲರ ಶೋಕಾಸ್ ನೋಟಿಸ್’ಗೆ ಪ್ರತಿಕ್ರಿಯೆ ನೀಡಿದ್ದು, ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ತಾರಕಕ್ಕೇರುವ ಲಕ್ಷಣಗಳು ತೋರಿಸುತ್ತಿದೆ.

   ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ಅವರು ರಾಜ್ಯಪಾಲರನ್ನು ಜುಲೈ 26 ಕ್ಕೆ ಭೇಟಿ ಮಾಡಿ ದಾಖಲೆಗಳನ್ನು ನೀಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂಬ ಅರ್ಜಿ ಸಲ್ಲಿಸಿದ್ದರು.

   ಈ ಅರ್ಜಿಯ ಬೆನ್ನಲ್ಲೇ ರಾಜಭವನದಿಂದ ಸಿದ್ದರಾಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದ್ದು, ನೋಟಿಸ್‌ನಲ್ಲಿ ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅನುಮತಿ ನೀಡಬಾರದೇಕೆ? ಎಂದೂ ಪ್ರಶ್ನಿಸಲಾಗಿತ್ತು. ಸಿದ್ದರಾಮಯ್ಯ ಅವರಿಗೆ ನೋಟಿಸ್‌ ನೀಡಿರುವ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ರಾಜಭವನ ತರಾತುರಿಯ ನಡೆಯ ಬಗ್ಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

  ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್ ವಾಪಸ್ ಪಡೆದುಕೊಳ್ಳಬೇಕು ಹಾಗೂ ಟಿಜೆ ಅಬ್ರಹಾಂ ಅವರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕಾರ ಮಾಡಬೇಕು ಎಂದು ಸಂಪುಟ ರಾಜ್ಯಪಾಲರಿಗೆ ಸಲಹೆಯನ್ನು ನೀಡಿದೆ. ಅಲ್ಲದೆ, ರಾಜ್ಯಪಾಲರ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಬೆಂಗಳೂರು ನಡೆದ ಬೆಂಗಳೂರಿನಲ್ಲಿ ನಡೆದ ‘13ನೇ ಬೆಂಗಳೂರು ಇಂಡಿಯಾ ನ್ಯಾನೊ’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ರಾಜ್ಯಪಾಲರ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

   ನನಗೆ ನೀಡಿರುವ ಶೋಕಾಸ್ ನೋಟಿಸ್’ಗೆ ಈಗಾಗಲೇ ಸಂಪುಟ ಸಲಚಿವರು ಉತ್ತರ ನೀಡಿದ್ದಾರೆ. ಪ್ರತ್ಯುತ್ತರವನ್ನು ಸಂಪುಟ ಸಿದ್ಧಪಡಿಸಿದ್ದು, ಮುಖ್ಯಮಂತ್ರಿಗೆ ನೀಡಲಾದ ನೋಟಿಸ್ ಹಿಂಪಡೆಯುವಂತೆ ಹಾಗೂ ಅಬ್ರಹಾಂ ನೀಡಿದ ದೂರನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದೆ ಎಂದು ಹೇಳಿದ್ದಾರೆ.ಇದೇ ವೇಳೆ ಮೈಸೂರಿನಲ್ಲಿಯೂ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು ರಾಜ್ಯಪಾಲರು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್‌ನ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆಂದು ಗುಡುಗಿದ್ದಾರೆ,

   ರಾಜ್ಯಪಾಲರು ಜೆಡಿಎಸ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ್ದಾರೆ. 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು ನಾನು. ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್​​ಗೆ ನಾನೇಕೆ ಹೆದರಲಿ. ಅಶೋಕ್ ಹೆದರಿರಬೇಕು ಅವರಿಗೆ ಭಯ ನನಗಲ್ಲ ಎಂದು ಹೇಳಿದರು.

   ಟಿಜೆ ಅಹ್ರಾಂ ಒಬ್ಬ ಬ್ಲ್ಯಾಕ್​​ಮೇಲರ್. ಜುಲೈ 26 ಕ್ಕೆ ಬೆಳಿಗ್ಗೆ 11:30 ಕ್ಕೆ ಆತ ದೂರು ಕೊಡುತ್ತಾನೆ. ಆ ದೂರಿನ ಪರಾಮರ್ಶೆ ಮಾಡದೇ ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್​ಕೆ ಅತೀಕ್​​ಗೆ ಹೇಳುತ್ತಾರೆ. ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

   ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿ, ಮುಡಾ ಕೇಸ್​​ನಲ್ಲಿ ಏನೂ ಇಲ್ಲ, ಪಾದಯಾತ್ರೆ ಬೇಡ ಅಂದಿದ್ದರು. ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ನೆರೆ ಪರಿಸ್ಥಿತಿ ಅವಲೋಕಿಸಿ, ಜನರ ಸಮಸ್ಯೆ ಸ್ಪಂದಿಸಿ ಅಂದಿದ್ದರು. ಬಿಜೆಪಿಯವರ ಒತ್ತಡಕ್ಕೆ ಮಣಿದು ಪಾದಯಾತ್ರೆ ಬೆಂಬಲಿಸಿದ್ದಾರೆ. ಹಾಗಾದರೆ ಈಗ ಮಳೆ ಹಾನಿ, ಪ್ರವಾಹ ಹೋಗಿದೆಯಾ? ಕುಮಾರಸ್ವಾಮಿ ಸ್ವಇಚ್ಛೆಯಿಂದ ಇದನ್ನು ಮಾಡುತ್ತಿಲ್ಲ. ಇದನ್ನೆಲ್ಲ ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು.

Recent Articles

spot_img

Related Stories

Share via
Copy link
Powered by Social Snap