ನವದೆಹಲಿ:
ಲೋಕಸಭಾ ಚುನಾವಣೆ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಬಹಿರಂಗ ಚರ್ಚೆಯಲ್ಲಿ ಭಾಗವಹಿಸುವ ಆಹ್ವಾನವನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕುರ್, ದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ. ಶಾಹ್ ಹಾಗೂ ಹಿರಿಯ ಪತ್ರಕರ್ತ ಎನ್. ರಾಮ್ ಅವರು ಹಾಲಿ ಲೋಕಸಭಾ ಚುನಾವಣೆ ಕುರಿತು ಬಹಿರಂಗ ಚರ್ಚೆಗೆ ಪ್ರಧಾನಿ ನರೇಂದ್ರ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದರು.
ಈ ಆಹ್ವಾನ ಕುರಿತು ಶನಿವಾರ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡಾ ಭಾಗವಹಿಸುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ.
‘ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ವೇದಿಕೆಯೊಂದರಿಂದ ದೇಶಕ್ಕೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಪ್ರಮುಖ ಪಕ್ಷಗಳಿಗೆ ಇದು ಸಕಾರಾತ್ಮಕ ಉಪಕ್ರಮವಾಗಿದೆ’ ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಚರ್ಚೆಯಲ್ಲಿ ಭಾಗವಹಿಸುತ್ತಾರೆ ಎಂದು ರಾಷ್ಟ್ರ ನಿರೀಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.