ಬೆಂಗಳೂರು:
ರಾಜ್ಯದಲ್ಲಿ ಆ್ಯಸಿಡ್ ನಿಷೇಧದ ಕುರಿತು ಚಿಂತನೆ ನಡೆಸಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಗುರುವಾರ ಹೇಳಿದರು.
ಆ್ಯಸಿಡ್ ದುರ್ಬಳಕೆಯಾಗುತ್ತಿದೆ. ಇದರಿಂದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಲ್ಲರ ಕೈಗೂ ಸುಲಭವಾಗಿ ಆ್ಯಸಿಡ್ ಸಿಗಬಾರದು. ಅಗತ್ಯತೆ ಇರುವರಿಗೆ ಮಾತ್ರ ಸಿಗಬೇಕು. ಈ ಕುರಿತು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಇನ್ನೆರಡು ದಿನದಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಇಂಡಸ್ಟ್ರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಕೇರಳ ಮೂಲದ ಅಭಿನ್ ಎಂಬಾತ ಈ ಕೃತ್ಯ ಎಸಗಿದ್ದ. ಕಡಬದ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಪ್ರಕರಣ ಸಂಬಂಧ ಆರೋಪಿ ಅಭಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ದಾಳಿಗೆ ಒಳಗಾದ ವಿದ್ಯಾರ್ಥಿನಿಯರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಅಲ್ಲದೆ, ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.