ಸ್ಯಾಮ್‌ ಪಿತ್ರೋಡ ಹೇಳಿಕೆ : ಬಿಜೆಪಿ ಅದನ್ನು ಖಂಡಿಸುತ್ತದೆ : ಆರ್‌ ಅಶೋಕ್‌

ಬೆಂಗಳೂರು: 

    ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ನಿಂದನೆಯ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಮ್‌ ಪಿತ್ರೋಡ ಅವರ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸಿದೆ. ವರ್ಣಭೇದ ನೀತಿ ಹಾಗೂ ಬಣ್ಣದ ಕುರಿತು ಮಾತಾಡುವುದು ಕಾಂಗ್ರೆಸ್‌ನ ಡಿಎನ್‌ಎ ಯಲ್ಲೇ ಇದೆ. ಇದಕ್ಕೂ ಮುನ್ನವೇ ಹಿನ್ನೆಲೆ ಗಾಯಕರಾಗಿ ಡಿ.ಕೆ.ಸುರೇಶ್‌ ಈ ಮಾತನಾಡಿದ್ದರು. ಈಗ ದೇಶ ಒಡೆಯುವ, ಛಿದ್ರ ಮಾಡುವ ಮಾತನ್ನು ಪಿತ್ರೋಡಾ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಸಿದ್ಧಾಂತವನ್ನು ತಿಳಿಸಿದ್ದಾರೆ ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣದ ಗ್ಯಾರಂಟಿಯನ್ನು ನೀಡಿದ್ದಾರೆ. ಹಿಂದೆ ವರ್ಣಭೇದ ನೀತಿಯಿಂದ ಅನೇಕ ಸಾವು ನೋವುಗಳಾಗಿತ್ತು. ನೆಲ್ಸನ್‌ ಮಂಡೇಲ, ಮಹಾತ್ಮ ಗಾಂಧೀಜಿಯಿಂದ ಇದರ ವಿರುದ್ಧ ಹೋರಾಟ ನಡೆದಿತ್ತು. ಆದರೆ ಕಾಂಗ್ರೆಸ್ ಬಣ್ಣದ ಆಧಾರದಲ್ಲಿ ಜನರ ಮನಸ್ಸನ್ನು ಒಡೆದಿದೆ. 5 ಸಾವಿರ ವರ್ಷಗಳ ಇತಿಹಾಸವಿರುವ ನಮ್ಮನ್ನು ಆಫ್ರಿಕಾದವರು ಎಂದಿದ್ದಾರೆ. ಒಕ್ಕಲಿಗರು, ಲಿಂಗಾಯಿತರು, ದಲಿತರಿಗೆ ಕಾಂಗ್ರೆಸ್‌ ಯಾವ ಬಣ್ಣ ಹಚ್ಚುತ್ತದೆ ಎಂದು ಪ್ರಶ್ನೆ ಮಾಡಿದರು.

    ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರೆಂದು ಒಪ್ಪಿಕೊಳ್ಳುವಂತೆ ಕಾಂಗ್ರೆಸ್‌ ನಾಯಕರು ಒತ್ತಾಯಿಸುತ್ತಾರೆ. ಸೋನಿಯಾ ದೇಶದ ಸೊಸೆ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಸೋನಿಯಾ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ವಾಡ್ರಾ ಯಾವ ದೇಶದಿಂದ ಬಂದಿದ್ದಾರೆ ಎಂದು ಮೊದಲು ತಿಳಿಸಬೇಕು. ನುಡಿದಂತೆ ನಡೆಯುವ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಹೇಳುತ್ತಾರೆ. ಈಗ ಬಿಳಿ ಗ್ಯಾರಂಟಿ, ಕಪ್ಪು ಗ್ಯಾರಂಟಿ, ಚೈನೀಸ್‌ ಗ್ಯಾರಂಟಿ, ಅರಬ್ಬಿ ಗ್ಯಾರಂಟಿ, ಆಫ್ರಿಕಾ ಗ್ಯಾರಂಟಿಯನ್ನು ನೀಡಿದ್ದಾರೆ ಎಂದರು.

    ಮಹಾರಾಷ್ಟ್ರದಲ್ಲಿ ಹುಟ್ಟಿದ ಡಾ.ಬಿ.ಆರ್‌.ಅಂಬೇಡ್ಕರ್‌ ಯಾರು, ಗುಜರಾತ್‌ನಲ್ಲಿ ಹುಟ್ಟಿದ ಗಾಂಧೀಜಿ ಯಾರು, ಬೆಂಗಳೂರು ಕಟ್ಟಿದ ಕೆಂಪೇಗೌಡರು ಯಾರು ಎಂದು ‌ಕಾಂಗ್ರೆಸ್ ಹೇಳಬೇಕು. ಈಗಾಗಲೇ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುತ್ತಿದೆ. ಮೋದಿ ಎಂದರೆ‌ ಕಪಾಳಕ್ಕೆ ಹೊಡಿ ಎಂದವರು ಪಿತ್ರೋಡಾಗೆ ಹೇಗೆ ಹೊಡೆಯುತ್ತಾರೆ ಎಂದು ಪ್ರಶ್ನೆ ಮಾಡಿದರು. 

   ಹಿಂದೆ ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ತಂದು ರಾಜ್ಯಗಳನ್ನು ಕಿತ್ತುಕೊಂಡರು. ಅದೇ ರೀತಿ ಈಗಿನ ಕಾಂಗ್ರೆಸ್ ಸ್ವಂತ ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ತರಲು ಮುಂದಾಗಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಲೂಟಿ ಮಾಡಿದ್ದೇವೆ ಎಂದು ಹೇಳಿದ್ದರು. ಅಂತಹ ಲೂಟಿಯ ಸಂಪತ್ತನ್ನು ನರೇಂದ್ರ ಮೋದಿ ಜನರಿಗೆ ನೀಡಲಿದ್ದಾರೆ. ದಕ್ಷಿಣ ಭಾರತದವರು ಆಫ್ರಿಕಾದವರು ಎನ್ನುವುದಾದರೆ ಸಿಎಂ ಸಿದ್ದರಾಮಯ್ಯ ಮೊದಲು ಆಫ್ರಿಕಾಗೆ ಹೋಗಿ ಅಲ್ಲಿ ಸಿಎಂ ಆಗಬೇಕು ಎಂದರು.

     ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಸಿಲರಿ ನೀರು, ಜ್ಯೂಸ್ ಕುಡಿದುಕೊಂಡು ಎಸಿಯಲ್ಲಿ ಕುಳಿತು ಪ್ರಧಾನಿ ನರೇಂದ್ರ ‌ಮೋದಿಗೆ ಪ್ರಶ್ನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಜನರಿಗೆ ನೀರು ನೀಡಿಲ್ಲ, ಹಾಲಿನ ಪ್ರೋತ್ಸಾಹಧನ ನೀಡಿಲ್ಲ, ಆಂಬ್ಯುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ, ಬಿಬಿಎಂಪಿ ಗುತ್ತಿಗೆದಾರರಿಗೆ ಬಿಲ್ ಕೊಟ್ಟಿಲ್ಲ, ನೇಹಾ ಹತ್ಯೆಗೆ 120 ದಿನಗಳಲ್ಲಿ ತೀರ್ಪು ಕೊಡುತ್ತೇನೆಂದು ಇನ್ನೂ ತನಿಖೆ ಶುರು ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಒಂದು ದಿನ ರಜೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಎಲ್ಲ ಬಗೆಯ ರಜೆ ಪಡೆದು ಮಜಾ ಮಾಡುತ್ತಿದ್ದಾರೆ. ಸದಾ ಕೆಲಸ ಮಾಡುವ ಮೋದಿ ಹಾಗೂ ಕೆಲಸ ಕಳ್ಳ ಸಿಎಂ ಸಿದ್ದರಾಮಯ್ಯ ಅವರ ನಡುವೆ ಎಲ್ಲಿಯ ಹೋಲಿಕೆ ಎಂದು ವ್ಯಂಗ್ಯವಾಡಿದರು‌.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap