ವಾಲ್ಮೀಕಿ ನಿಗಮ ಹಗರಣ : SIT ತನಿಖೆ ಮೇಲೆ ನಮಗೆ ನಂಬಿಕೆ ಇದೆ : ಸಿದ್ದರಾಮಯ್ಯ

ಬೆಂಗಳೂರು:

   ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇದರಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಹಾಗೂ ವೈಯಕ್ತಿಕವಾಗಿ ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.

   ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್‌ ಸುಪರಿಡೆಂಟ್‌ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡ ದಿನವೇ ಅವರ ಪತ್ನಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮೇ 31ರಂದು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಇದರಲ್ಲಿ ನಾಲ್ಕು ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳು ಇದ್ದಾರೆ. ತನಿಖೆ ಅತ್ಯಂತ ದಕ್ಷವಾಗಿ, ವಸ್ತುನಿಷ್ಠವಾಗಿ ನಡೆಯುತ್ತಿದ್ದು ನನಗೆ ತನಿಖೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.

   ಯೂನಿಯನ್‌ ಬ್ಯಾಂಕ್‌ ಅಫ್‌ ಇಂಡಿಯಾದ ಅಧಿಕಾರಿ ಮಹೇಶ್‌ ಎಂಬುವರ ದೂರಿನ ಮೇರೆಗೆ ಸಿಬಿಐ ತನಿಖೆಯನ್ನು ಕೈಗೊಂಡಿದ್ದು, ಇ.ಡಿ ಸ್ವಯಂ ಪ್ರೇರಿತವಾಗಿ ತನಿಖೆಯನ್ನು ನಡೆಸುತ್ತಿದೆ. ಎಸ್‌ಐಟಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಬಂಧಿಸಿದ್ದು, 34 ಕೋಟಿ ರೂ. ನಗದು ವಶಪಡಿಸಿಕೊಂಡಿದೆ. ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದ್ದ ಸುಮಾರು ರೂ. 46 ಕೋಟಿ ಸ್ಥಗಿತಗೊಳಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ನಾವು ಹೇಳುತ್ತಿಲ್ಲ. ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

   ವಿಧಾನಮಂಡಲ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರು ನಿಯಮ 69ರ ಅಡಿಯಲ್ಲಿ 7 ತಾಸಿಗೂ ಅಧಿಕ ಕಾಲ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೆ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಅವಕಾಶದಷ್ಟೇ, ಸರ್ಕಾರಕ್ಕೂ ತನ್ನ ನಿಲುವು ವ್ಯಕ್ತಪಡಿಸಲು ಹಕ್ಕಿದೆ. ಆದರೆ ವಿಪಕ್ಷಗಳಿಗೆ ನಮ್ಮ ಉತ್ತರದ ಅಗತ್ಯವಿಲ್ಲ, ಅವರಿಗೆ ಬೇಕಿರುವುದು ಕೇವಲ ರಾಜಕೀಯ ಟೀಕೆ ಮಾತ್ರ ಎಂದು ವಾಗ್ದಾಳಿ ನಡೆಸಿದರು. 

   ವಾಲ್ಮೀಕಿ ಅಭಿವೃದ್ಧಿ ನಿಗಮದ 89.63 ಕೋಟಿ ರೂ. ಹಣವನ್ನು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಂಜಿ ರಸ್ತೆ ಖಾತೆಗೆ ವರ್ಗಾಯಿಸಿ ಅಲ್ಲಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕ್‌ ಆಗಿದ್ದು, ಕೇಂದ್ರ ಹಣಕಾಸು ಇಲಾಖೆ ಅಧೀನಕ್ಕೆ ಬರುತ್ತದೆ. ಬ್ಯಾಂಕ್‌ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಕುರಿತು ಆತ್ಮಹತ್ಯೆ ನೋಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು? ಎಂದು ಪ್ರಶ್ನಿಸಿದರು.

   ಪರಿಶಿಷ್ಟ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ ಅವರು ಸ್ವಯಂಪ್ರೇರಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಹಗರಣವಾದಾಗ ಅವರ ಪಕ್ಷದವರೇ ಆದ ಗೂಳಿಹಟ್ಟಿ ಶೇಖರ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಆಗ ಯಾರು ರಾಜೀನಾಮೆ ನೀಡಿದ್ದರು? ಎಪಿಎಂಸಿ ಯಲ್ಲಿ ಆವರ್ತನಿಧಿ ʻಲೂಟಿ ಮಾಡಿದಾಗ, ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ಹಗರಣದಲ್ಲಿ 47.10 ಕೋಟಿ ರೂ. ಅವ್ಯವಹಾರವಾದಾಗ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೇ? ಈ ಪ್ರಕರಣಗಳಲ್ಲಿ ಇ.ಡಿ. ಯಾಕೆ ಸ್ವಯಂ ಪ್ರೇರಿತವಾಗಿ ತನಿಖೆ ಕೈಗೆತ್ತಿಕೊಂಡಿಲ್ಲ?ಎಂದು ತರಾಟೆಗೆ ತೆಗೆದುಕೊಂಡರು.

  ಎಲ್ಲಾ ಅಭಿವೃದ್ಧಿ ನಿಗಮಗಳ ಹಣವನ್ನು ಕಡ್ಡಾಯವಾಗಿ ರಾಜ್ಯ ಖಜಾನೆಯಲ್ಲಿ ಜಮಾ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ಹಲವು ಮಾರ್ಗಸೂಚಿಗಳನ್ನು ಹಣಕಾಸು ಇಲಾಖೆ ಜಾರಿಗೊಳಿಸಿದೆ. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap