ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿ: ಸಚಿವ ಡಾ.‌ಜಿ.ಪರಮೇಶ್ವರ

ಮಧುಗಿರಿ:

    ಚುನಾವಣೆಗೂ ಮೊದಲು ನಮ್ಮ‌ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು‌.

    ಮಧುಗಿರಿ ತಾಲ್ಲೂಕಿನ ಕೊಡಲಾಪುರ, ಕೊಡಗದಾಲ, ಗೊಂದಿಹಳ್ಳಿ, ಪುರವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು, ಜನಪರ ಆಡಳಿತ ನೀಡುವ ಬಗ್ಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸರ್ಕಾರ ರಚನೆಯಾಗಿ ಎಂಟು ತಿಂಗಳಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದೇವೆ. ಇನ್ನು ಹಲವು ಮಹತ್ವಪೂರ್ಣ ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೆ ತರಲಿದೆ ಎಂದರು.

    ಗಾಂಧೀಜಿಯವರ ಪರಿಕಲ್ಪನೆಯಂತೆ ಗ್ರಾಮ ಸ್ವರಾಜ್ಯ ದೃಷ್ಟಿಯಲ್ಲಿ ಕೆಲಸಗಳಾಗಬೇಕು. ದೇಶದಲ್ಲಿ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ನಂತರ ಸ್ಥಳೀಯ ಅಭಿವೃದ್ಧಿಯ ಕೆಲಸಗಳ ಜವಾಬ್ಧಾರಿಯನ್ನು ಅಲ್ಲಿನ ಜನರಿಗೆ ವಹಿಸಲಾಗಿದೆ‌. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸಿದ ಪರಿಣಾಮ, ಸಮಾಜದಲ್ಲಿ ಅವರ ಸ್ಥಾನಮಾನ ಹೆಚ್ವಿದೆ ಎಂದು ತಿಳಿಸಿದರು.

    ಶೋಷಿತರು, ನೊಂದವರು, ಕಷ್ಟದಲ್ಲಿರುವರಿಗೆ ನ್ಯಾಯ ಸಿಗುವ ಕೆಲಸಗಳಾಗಬೇಕು‌. ತಾಲ್ಲೂಕಿನಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುಧಾನ ನೀಡಲಾಗುವುದು. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಸ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ವಾರದೊಳಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

    ರಾಜ್ಯದಲ್ಲೇ ಮೊದಲ ಬಾರಿಗೆ ತುಮಕೂರು ಆರೋಗ್ಯ ಅಭಿಯಾನ ವಿಶೇಷ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಮನೆ ಬಾಗಿಲಿಗೆ ಬಂದು ಆರೋಗ್ಯ ಸೇವೆ ನೀಡುತ್ತಿದ್ದಾರೆ.ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಇನ್ನು ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಮೀಣ ಭಾಗದ ಆರೋಗ್ಯ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಜನರಿಗೆ 24 ಗಂಟೆ ಆರೋಗ್ಯ ಸೇವೆ ಸಿಗಲಿದೆ ಎಂದು ತಿಳಿಸಿದರು.

    ಕೊರಟೆಗೆರೆ ಕ್ಷೇತ್ರದಲ್ಲಿ ಕುಡಿಯುವ ನೀರು ಯೋಜನೆ ಸೇರಿದಂತೆ ಮಲ್ಟಿ ವಿಲೇಜ್ ಸ್ಕೀಮ್ ಯೋಜನೆಗೆ 400 ಕೋಟಿ ರೂ. ಖರ್ಚಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಗೆ 100 ರೂ. ಅನುಧಾನ ಖರ್ಚಾಗುತ್ತಿದೆ. ಅಭಿವೃದ್ಧಿ ಕೆಲಸವನ್ನು ಬಾಯಿಮಾತಿಗೆ ಸೀಮಿತಿಗೊಳಿಸದೆ, ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಹೇಳಿದರು.

    ನಾನು ಚಾವಡಿ ಶಾಲೆಯಲ್ಲಿ ಕಲಿತಿದ್ದೇನೆ. ಇಂದಿನ ಮಕ್ಕಳಿಗೆ ಅಂತಹ ಪರಿಸ್ಥಿತಿ ಇರಬಾರದು. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಶಿಕ್ಷಣವನ್ನು ಅವರಿಗೆ ನೀಡಬೇಕು ಎಂಬುದು ನಮ್ಮ ಸಂಕಲ್ಪ. ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

    ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನಮ್ಮ ಸರ್ಕಾರವು 13,500 ಕೋಟಿ ರೂ. ಅನುಧಾನವನ್ನು ಮೀಸಲಿಡಲಾಗಿತ್ತು. ತದನಂತರ ಬಂದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ನಿರ್ಲಕ್ಷಿಸಿದ ಪರಿಣಾಮ ಯೋಜನೆಯ ವೆಚ್ಚ ಹೆಚ್ಚಾಗುತ್ತಿದೆ. 23,500 ಕೋಟಿ ರೂ. ಖರ್ಚಾಗುತ್ತಿದ್ದು ಮುಂದಿನ ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು‌.

    ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು, ತಹಶೀಲ್ದಾರ್ ಶ್ರೀನಿವಾಸ್, ಎಸ್‌ಪಿ ಅಶೋಕ್, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link