ದುಷ್ಟ ಕೂಟಗಳ ವಿರುದ್ಧ ಹೋರಾಡಬೇಕಿದೆ

ತುಮಕೂರು:

     ಜಾತ್ಯಾತೀತ ಸಂಘಟನೆಗಳ ಒಕ್ಕೂಟ ಮತ್ತು ಅಖಿಲ ಭಾರತ ಡಾ.ಬಿ.ಆರ್. ಅಂಬೇಡ್ಕರ್ ಪ್ರಚಾರ ಸಮಿತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಟೌನ್‍ಹಾಲ್ ಆವರಣದಲ್ಲಿ “ಸಂವಿಧಾನ ಸಮರ್ಪಣಾ ದಿನೋತ್ಸವ”ವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್ ಮಾತನಾಡಿ, 1949 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದಲೇ ಇಂದು ನಾವೆಲ್ಲರೂ ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದೇವೆ, 2021ರವರೆಗೂ ಸಂವಿಧಾನ ನಮ್ಮನ್ನು ಕಾಪಾಡಿಕೊಂಡು ಬಂದಿದೆ. ಎಲ್ಲೋ ಒಂದು ಕಡೆ ಕೆಲವು ಕಿಡಿಗೇಡಿಗಳು ಸಂವಿಧಾನದ ವಿರುದ್ಧವಾದ ಕೆಲಸಗಳನ್ನು ಇಡೀ ಭಾರತದಾದ್ಯಂತ ನಡೆಸುತ್ತಿದೆ. ಅಂತಹ ದುಷ್ಟಕೂಟಗಳ ವಿರುದ್ಧ ನಾವೆಲ್ಲಾ ಒಗ್ಗೂಡಿ ಹೋರಾಟ ಮಾಡುವಂತಹ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಾದ ನಾಯಕರಲ್ಲ, ಎಲ್ಲಾ ಜನಾಂಗಕ್ಕೂ ಸೀಮಿತರಾದ ನಾಯಕರು, ನಾವು ಇಂದು ಶಾಂತಿ, ಸೌಹಾರ್ದತೆಯಿಂದ ಬೆಳೆದಿರುವುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನವೇ ಕಾರಣ ಎಂದರು.ದೇಶದ ನೀರಾವರಿ ಯೋಜನೆಗಳು, 1935 ಏಪ್ರಿಲ್ 1 ಆರ್‍ಬಿಐ ಸ್ಥಾಪನೆಯಾಗುವುದಕ್ಕೂ ಮೂಲ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಕಾರಣಕರ್ತರಾಗಿದ್ದಾರೆ ಎಂದು ತಿಳಿಸಿದರು.

ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ಶೋಷಿತರ ಧ್ವನಿ, ದಬ್ಬಾಳಿಕೆಗೆ ಒಳಗಾದವರು, ಬಡವರು, ಹಿಂದುಳಿದವರು, ಯಾವುದೇ ತರಹದ ಸವಲತ್ತುಗಳನ್ನು ಪಡೆಯದೇ ಸಮಾಜದಲ್ಲಿ ಹಿಂದುಳಿದ ಸಮಾಜದಿಂದ ಬಂದಂತಹ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಬಡವರ, ಹಿಂದುಳಿದವರ, ದೀನ ದಲಿತರ, ದಮನಿತರ ಮತ್ತು ಶೋಷಿತರ ಬಗ್ಗೆ ಕಾಳಜಿ ಹೊಂದಿ ಅವರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಿದರು. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನವನ್ನು ಇತರೆ ದೇಶಗಳೂ ಸಹ ಅಳವಡಿಸಿಕೊಂಡು ಅಂಬೇಡ್ಕರ್ ಸಂವಿಧಾನಕ್ಕೆ ಗೌರವವನ್ನು ಸೂಚಿಸಿವೆ ಎಂದು ಹೇಳಿದರು.

ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟಂತಹ ಅಂಬೇಡ್ಕರ್ ಇಲ್ಲದಿದ್ದರೆ ನಾವು ಇಂದು ಇಲ್ಲಿ ಶಾಂತಿಯುತವಾಗಿ ಬಂದು ಮಾತನಾಡುವ ಹಕ್ಕನ್ನು ಪಡೆಯುತ್ತಿರಲಿಲ್ಲ, ಅಂಬೇಡ್ಕರ್ ಕೊಟ್ಟಂತಹ ಸಂವಿಧಾನಕ್ಕೆ ಇಂದು ಧಕ್ಕೆ ಬರುವಂತಹ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು, ಅಂತಹವರಿಗೆ ಸಂವಿಧಾನದ ಮಹತ್ವನ್ನು ತಿಳಿಸಿಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹ ಶೋಷಿತರು, ಬಡವರು, ಅಲ್ಪಸಂಖ್ಯಾತರು, ದೀನದಲಿತರು ಎಲ್ಲರೂ ಒಂದಾಗಿ ಈ ಸಂವಿಧಾನವನ್ನು ರಕ್ಷಣೆ ಮಾಡಿದಾಗ ಮಾತ್ರ ಭಾರತ ದೇಶದ ರಕ್ಷಣೆಯಾಗುತ್ತದೆ ಎಂದರು.

ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಾಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಜಾತಿಗೂ ಅವರು ನಾಯಕರೇ. ನಾವು ಇಂದು ರಾಜಕಾರಣ ಅಥವಾ ಒಳ್ಳೆಯ ಹುದ್ದೆಯಲ್ಲಿದ್ದೇವೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳಬೇಕಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕಾರಣಿಗಳು ನಾಲಗೆ ಹರಿಬಿಡುತ್ತಿದ್ದು, ಸಂವಿಧಾನ ಬದಲಾವಣೆಯ ಕಿಡಿ ಹೊತ್ತಿಸುವ ಹೇಳಿಕೆಗಳು ನೀಡುತ್ತಿದ್ದಾರೆ, ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದರೆ ನಾವು ಮೊದಲು ಹೇಳಿಕೆ ನೀಡಿರುವಂತಹವರನ್ನು ಬದಲಾಯಿಸಬೇಕಿದೆ. ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿದರೆ ಅಂತಹವರ ಮನೆಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಮತ್ತು ಭಾರತದಿಂದಲೇ ಗಡಿಪಾರು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ನಗರಪಾಲಿಕೆ ಸದಸ್ಯರುಗಳು ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ, ನಗರದಲ್ಲಿ ಯಾವುದಾದರೊಂದು ದೊಡ್ಡ ರಸ್ತೆಗೆ ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ಡಾ.ಬಿ.ಆರ್. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿರುತ್ತದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ ಎಂದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿ, ಯುವ ಸಮುದಾಯ ಭಾರತದ ಮೂಲ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ದೇಶದಲ್ಲಿ ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಎನ್.ಕೆ.ನಿಧಿಕುಮಾರ್, ಕೆ.ಗೋವಿಂದರಾಜು, ನಿವೃತ್ತ ಆಯುಕ್ತ ಪಿ. ಚಂದ್ರಪ್ಪ, ಕೆಂಪಣ್ಣ, ಶಿವಣ್ಣ, ಎ.ಡಿ.ನರಸಿಂಹರಾಜು, ವಕೀಲ ರಜನಿಕಾಂತ್, ಹೆಚ್.ಬಿ.ರಾಜೇಶ್, ಎಸ್.ಲಕ್ಷ್ಮೀನಾರಾಯಣ, ಸಿ.ಮಾರುತಿ, ಜಿ.ಸಿ.ಸಿದ್ಧಲಿಂಗಯ್ಯ, ಆಟೋ ಶಿವರಾಜು, ನರಸೀಯಪ್ಪ, ರಂಗಸ್ವಾಮಯ್ಯ, ಗಂಗಾಧರ, ಕೆ.ಸಿದ್ಧಲಿಂಗಯ್ಯ, ರಾಜೇಂದ್ರ, ಭರತ್, ಕೆ.ನರಸಿಂಹಮೂರ್ತಿ, ವಿಠ್ಠಲ್, ಕೃಷ್ಣಮೂರ್ತಿ, ಕುಮಾರ್, ಸಾಗರ್, , ತ್ರಿಲೋಕ್ ಜಯಪುರ, ಎ.ಎಸ್.ಶಿವರಾಜು ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap