ವಾಷಿಂಗ್ಟನ್:
ದೇಶವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದ್ದು ನಾನು ಈ ಬಾರಿ 2024 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ನಿನ್ನೆ ಅವರು ಓವಲ್ ಆಫೀಸ್ ಮಾಡಿದ ಐತಿಹಾಸಿಕ ಭಾಷಣದಲ್ಲಿ ಪಕ್ಷದಲ್ಲಿ ಕಿರಿಯರು ಧ್ವನಿಯೆತ್ತುವ ಸಮಯ ಇದಾಗಿದ್ದು ಯುವಕರಿಗೆ ಅವಕಾಶ ಮಾಡಿಕೊಡುವುದು ತಮ್ಮ ಉದ್ದೇಶವಾಗಿದೆ ಎಂದಿದ್ದಾರೆ.
ನಾನು ಈ ಹುದ್ದೆ ಮತ್ತು ಕಛೇರಿಯನ್ನು ಗೌರವಿಸುತ್ತೇನೆ. ಆದರೆ ಅದಕ್ಕಿಂತಲೂ ಹೆಚ್ಚು ನನ್ನ ದೇಶವನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು 81 ವರ್ಷ ವಯಸ್ಸಿನ ಜೋ ಬೈಡನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಪ್ರೈಮ್-ಟೈಮ್ ಭಾಷಣದಲ್ಲಿ ಇಂದು ದೇಶ ಪ್ರಜಾಪ್ರಭುತ್ವವನ್ನು ಸ್ವೀಕರಿಸಲು ದ್ವೇಷ ಭಾವನೆಯನ್ನು ದೂರ ಮಾಡಬೇಕೆಂದು ಒತ್ತಾಯಿಸಿದರು.
ಇಂದು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಯು ಅಪಾಯದಲ್ಲಿದೆ, ಅದನ್ನು ಕಾಪಾಡುವುದು ಅತ್ಯಗತ್ಯವಾಗಿದೆ. ಹೊಸ ಪೀಳಿಗೆಗೆ ಗೌರವಾನ್ವಿತ ಹುದ್ದೆಯ ಜ್ಯೋತಿಯನ್ನು ರವಾನಿಸುವುದು ಮುಂದಿನ ಉತ್ತಮ ಮಾರ್ಗವಾಗಿದೆ ಎಂದು ನಾನು ನಿರ್ಧರಿಸಿದ್ದೇನೆ. ಅದು ನಮ್ಮ ರಾಷ್ಟ್ರವನ್ನು ಒಂದುಗೂಡಿಸಲು ಉತ್ತಮ ಮಾರ್ಗವಾಗಿದೆ ಎಂದರು.
ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಧ್ಯಕ್ಷ ಚುನಾವಣೆಯಿಂದ ಜೋ ಬೈಡನ್ ಹಿಂದೆ ಸರಿದಿರುವುದರಿಂದ ಉಪಾಧ್ಯಕ್ಷೆ 59 ವರ್ಷದ ಕಮಲಾ ಹ್ಯಾರಿಸ್ ಅವರು ಹೊಸ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಲಿದ್ದಾರೆ.
ಕಮಲಾ ಹ್ಯಾರಿಸ್ ಅವರಿಗೆ ಅನುಭವವಿದೆ, ಅವರು ಕಠಿಣವಾಗಿದ್ದು ದೃಢ ನಿರ್ಧಾರ ಕೈಗೊಳ್ಳಲು ಸಮರ್ಥರಾಗಿದ್ದಾರೆ ಎಂದು ನಾಲ್ಕನೇ ಬಾರಿ ದೇಶವನ್ನುದ್ದೇಶಿಸಿ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.