ಚಿಕ್ಕಬಳ್ಳಾಪುರ:
ಭಾರತದ ಅಭಿವೃದ್ಧಿ ಪಥದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ. ಈ ಸಂಸ್ಥೆಗಳು ಕೇವಲ ಧರ್ಮ ಮತ್ತು ನಂಬಿಕೆಯ ಸಂದೇಶವನ್ನು ಹರಡಲು ಸಹಾಯ ಮಾಡಿಲ್ಲ.ಬಡವರು, ಹಿಂದುಳಿದವರು,ಮಹಿಳೆಯರು, ಬುಡಕಟ್ಟು ಮತ್ತು ಸಮಾಜದ ಇತರ ಅಶಕ್ತ ವರ್ಗಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಅವರು ಇಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಸತ್ಯಸಾಯಿ ಗ್ರಾಮದಲ್ಲಿ ಸುಮಾರು 400 ಕೋಟಿ ರೂಪಾಯಿ ವೆಚ್ಚದ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ( ಮೆಡಿಕಲ್ ಕಾಲೇಜು ) ಉದ್ಘಾಟನೆ ಮಾಡಿ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದ ನನ್ನ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳವಾಗಿದೆ. ಇಂತಹ ಪುಣ್ಯಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ ಎಂದರು.
ಭಾರತವು ತನ್ನಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುವ ಹಾದಿಯಲ್ಲಿ ನಡೆಯಲು ನಿರ್ಧರಿಸಿದೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಈ ಸಾಧನೆಯನ್ನು ದೇಶ ಹೇಗೆ ಸ್ವೀಕರಿಸುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ. ಅದು ಹೇಗೆ ಕಾರ್ಯಸಾಧ್ಯವಾಗುತ್ತದೆ ಇಂತಹ ಪ್ರಶ್ನೆಗಳಿಗೆ ಒಂದೇ ಒಂದು ಉತ್ತರ ಎಲ್ಲರ ಪ್ರಯತ್ನ ಎಂದು ಮೋದಿ ಹೇಳಿದರು.
ಕರ್ನಾಟಕವು ಋಷಿಮುನಿಗಳು, ಆಶ್ರಮಗಳು, ಮಠ ಮಾನ್ಯಗಳ ಪರಂಪರೆಯ ಪುಣ್ಯ ಭೂಮಿಯಾಗಿದೆ. ಈ ಪ್ರಾಚೀನ ಸಂಪ್ರದಾಯಗಳು ಇಲ್ಲಿ ಹೆಚ್ಚು ಜೀವಂತವಾಗಿವೆ. ಚಿಕ್ಕಬಳ್ಳಾಪುರವು ನಾಡಿನ ಜನರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವ ಸಂಕಲ್ಪದ ಮೂಲಕ ಮಾನವೀಯತೆಯ ಸೇವೆಯ ಧ್ಯೇಯವನ್ನು ತೋರಿದೆ. ಈ ಸಾಧನೆಗಳು ಅದ್ಭುತವಾಗಿವೆ. ಇದಲ್ಲದೆ, ಇಂದು ಇಲ್ಲಿ ಉದ್ಘಾಟನೆಗೊಳ್ಳುತ್ತಿರುವ ವೈದ್ಯಕೀಯ ಕಾಲೇಜು ಈ ಮಹಾನ್ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ದುಬಾರಿ ಅನ್ನಿಸುವಂತಹ ಆರೋಗ್ಯ ಸೇವೆಯನ್ನು ಸಹ ಸರ್ವರಿಗೂ ಉಚಿತವಾಗಿ ನೀಡಲು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮುದ್ದೇನಹಳ್ಳಿಯಲ್ಲಿ ಆರಂಭವಾಗಿರುವುದು ಶ್ಲಾಘನೀಯವಾದದ್ದು. ಈ ದಿಸೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಮುಂದಾಗಿರುವುದು ಅಭಿನಂದನಾರ್ಹ, ಇದು ನಿಜವಾದ ಆತ್ಮ ನಿರ್ಭರ ಭಾರತ ಎಂದರು.
5 ಲಕ್ಷ ವಿಮಾ ವ್ಯಾಪ್ತಿಗೆ ಒಳ ಪಟ್ಟು ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ” ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, 1.5 ಕೋಟಿ ಜನರನ್ನು ಈ ಯೋಜನೆಯಡಿ ಈ ವರೆಗೆ ನೋಂದಾಯಿಸಲಾಗಿದೆ ಎಂದು ಈ ವೇಳೆ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಮೋದಿಗೆ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ