ಕೋಲ್ಕತ್ತಾ
ಟಿಎಂಸಿ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲಿದೆ ಎಂದು ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ಮೂಲಕ ವಿರೋಧ ಪಕ್ಷಗಳ ಮೈತ್ರಿಗೆ ಈಗಲೇ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಮಾತುಕತೆ ಆರಂಭವಾಗುವ ಮುನ್ನವೆ ಮುರಿದುಬಿದ್ದಿದೆ.
ಬಂಗಾಳದ ಸಾಗರ್ದಿಘಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ತೃಣಮೂಲದಿಂದ ವಿಧಾನಸಭಾ ಸ್ಥಾನವನ್ನು ಗೆದ್ದುಕೊಂಡಿದೆ. ಇದಕ್ಕೆ ಟೀಕೆ ಮಾಡಿರುವ ಮಮತಾ ಬ್ಯಾನರ್ಜಿ ಕಾಂಗ್ರೆಸ್, ಎಡ ಮತ್ತು ಬಿಜೆಪಿ ಎಲ್ಲರೂ ಸಾಗರ್ದಿಘಿಯಲ್ಲಿ ಕೋಮುವಾದದ ಆಟವಾಡಿದ್ದಾರೆ. ವ್ಯತ್ಯಾಸವೆಂದರೆ ಬಿಜೆಪಿ ಇದನ್ನು ಬಹಿರಂಗವಾಗಿ ಆಡಿದೆ, ಆದರೆ ಸಿಪಿಎಂ ಮತ್ತು ಕಾಂಗ್ರೆಸ್ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.