ಸೆರಾಂಪೋರ್:
ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಮರಳಿ ಪಡೆಯುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಪುನರುಚ್ಛರಿಸಿದ್ದಾರೆ.
ಸೆರಾಂಪೋರ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರವನ್ನು ಉಲ್ಲೇಖಿಸಿ ಮಾತನಾಡಿದರು.
370 ಕಾಯ್ದೆ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ಮೊಳಗಿವೆ. ಮೊದಲು ಆಜಾದಿ ಘೋಷಣೆಗಳು ಕೇಳಿದ್ದವು. ಇದೀಗ ಮತ್ತೆ ಅದೇ ಘೋಷಣೆಗಳು ಮೊಳಗುತ್ತಿವೆ. ಮೊದಲು ಭಾರತದ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿತ್ತು. ಇದೀಗ ಪಾಕಿಸ್ತಾನದ ಮೇಲೆಯೇ ಕಲ್ಲು ತೂರಾಟ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಪಿಒಕೆ ಸ್ವಾಧೀನಪಡಿಸಿಕೊಳ್ಳುವ ಬೇಡಿಕೆಯನ್ನು ಬೆಂಬಲಿಸದ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಮಣಿಶಂಕರ್ ಅಯ್ಯರ್ ಅವರಂತಹ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಬಳಿಕ ಅಣುಬಾಂಬ ಇದೆ. ಹೀಗಾಗ ಈ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಹೇಳುತ್ತಾರೆ. ಆದರೆ, ಈ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಪಡೆಯುವುದು ಖಚಿತ ಎಂದು ಹೇಳಲು ನಾನು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಬಳಿಕ ಸಿಎಎ ವಿರೋಧಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯು ಇಂಡಿಯಾ ಮೈತ್ರಿಕೂಟದ ಭ್ರಷ್ಟ ನಾಯಕರು ಮತ್ತು ಪ್ರಾಮಾಣಿಕ ರಾಜಕಾರಣಿ ನರೇಂದ್ರ ಮೋದಿ ಅವರ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಮೋದಿಯವರು ಮುಖ್ಯಮಂತ್ರಿ, ನಂತರ ಪ್ರಧಾನಿಯಾಗಿದ್ದರೂ ಕೂಡ ಅವರ ವಿರುದ್ಧ ಒಂದು ಪೈಸೆಯ ಆರೋಪ ಕೇಳಿಬಂದಿಲ್ಲ. ನುಸುಳುಕೋರರು ಬೇಕೋ ಅಥವಾ ನಿರಾಶ್ರಿತರಿಗೆ ಸಿಎಎ ಬೇಕೋ ಎಂಬುದನ್ನು ಬಂಗಾಳದ ಜನತೆಯೇ ನಿರ್ಧರಿಸಬೇಕು, ಜಿಹಾದ್‌ಗೆ ಮತ ಹಾಕಬೇಕೆ ಅಥವಾ ವಿಕಾಸ್‌ಗೆ ಮತ ಹಾಕಬೇಕೆ ನೀವೇ ನಿರ್ಧರಿಸಿ ಎಂದು ತಿಳಿಸಿದರುಯ.
ಈ ನಡುವೆ ಜಾರ್ಖಾಂಡ್ ರ್ಯಾಲಿಯಲ್ಲಿ ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ಪಾಕಿಸ್ತಾನ ಆಕ್ರಮಿಕ ಕಾಶ್ಮೀರ ಭಾರತಕ್ಕೆ ಸೇರ್ಪಡೆಯಾಗುವುದು ಖಚಿತ ಎಂದು ಹೇಳಿದ್ದಾರೆ.
ಬಿಜೆಪಿ 300 ಸ್ಥಾನಗಳನ್ನು ಪಡೆದಾಗ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದೆ. ಅದರಂತೆ ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳನ್ನು ಪಡೆದರೆ, ಮಥುರಾದ ಕೃಷ್ಣ ಜನ್ಮಭೂಮಿ ಸ್ಥಳದಲ್ಲಿ ಮತ್ತು ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುವುದು. ಅಲ್ಲದೆ, ಪಿಒಕೆ ಭಾರತಕ್ಕೆ ಸೇರುವಂತೆ ಮಾಡಲಾಗುತ್ತದೆ.. ಅದಕ್ಕಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಸ್ಥಾನಗಳು ಬೇಕು ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಒಂದು ಕಾಶ್ಮೀರವು ಭಾರತದಲ್ಲಿ ಮತ್ತು ಇನ್ನೊಂದು ಪಾಕಿಸ್ತಾನದಲ್ಲಿದೆ ಎಂದು ನಮಗೆ ಹೇಳಲಾಯಿತು. ಪಾಕಿಸ್ತಾನ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂದು ನಮ್ಮ ಸಂಸತ್ತಿನಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ. ಅದು ನಿಜವಾಗಿ ನಮ್ಮದು. ಇದೀಗ ಅಲ್ಲಿ ಆಂದೋಲನ ನಡೆಯುತ್ತಿದೆ. ಪಿಒಕೆಯಲ್ಲಿನ ಜನರು ಪ್ರತಿದಿನ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ. ಮೋದಿ ಅವರು 400 ಸ್ಥಾನಗಳನ್ನು ಪಡೆದರೆ, ಪಿಒಕೆ ಭಾರತಕ್ಕೆ ಸೇರುತ್ತದೆ ಎಂದು ತಿಳಿಸಿದರು.