ಲೋಕಸಭೆ ಚುನಾವಣೆ : ಪಕ್ಷ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ : ಬಿವೈವಿ

ಬೆಂಗಳೂರು: 

   2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸುವುದೇ ನನ್ನ ಆದ್ಯತೆ ಎಂದು ನೂತನವಾಗಿ ನೇಮಕಗೊಂಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಬಿವೈ ವಿಜಯೇಂದ್ರ ಹೇಳಿದ್ದಾರೆ.

     ಬಿಜೆಪಿ ಪ್ರಧಾನ ಕಾರ್ಯದರ್ಶಿ  ಬಿಎಲ್ ಸಂತೋಷ್, ಪ್ರಲ್ಹಾದ್ ಜೋಶಿ, ಬಸನಗೌಡ ಪಾಟೀಲ್ ಯತ್ನಾಳ್, ಮತ್ತು ವಿ ಸೋಮಣ್ಣ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾಜ್ಯ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರ ಬಗ್ಗೆ ಸಮರ್ಥನೆ ನೀಡಿದ್ದಾರೆ.

     ನನಗೆ ಮೊದಲ ಶುಭಾಶಯ ಕೋರಿದವರು ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಎಲ್ ಸಂತೋಷ್.  ಅವರು ಪಕ್ಷದ ಅತ್ಯಂತ ಉನ್ನತ ನಾಯಕರುಗಳು. ನಾಯಕರಾದ ವಿ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

 
    ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ.ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಪಕ್ಷದ ಕಚೇರಿಗೆ ಬಂದು ಆಶೀರ್ವಾದ ಮಾಡಿದರು. ನನ್ನನ್ನು ಆಶೀರ್ವದಿಸುವುದು ಅವರ ಕರ್ತವ್ಯ ಎಂದು  ಬೊಮ್ಮಾಯಿ ಹೇಳಿದರು ಎಂದು ವಿಜಯೇಂದ್ರ ತಿಳಿಸಿದ್ದಾರೆ.

 

    ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದವರು ಯಾರು? ಯಡಿಯೂರಪ್ಪನಾ? ಅದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ. ಕರ್ನಾಟಕದ ಎಲ್ಲಾ 28 ಸೀಟುಗಳನ್ನು ಗೆದ್ದು  ಮೋದಿ ಅವರಿಗೆ ತಲುಪಿಸುವುದು ನನ್ನ ಕೆಲಸ. ಯಾರಾದರೂ ನನ್ನನ್ನು ವಿರೋಧಿಸಿದರೆ ಅವರು ಮೋದಿಯನ್ನು ವಿರೋಧಿಸಿದಂತೆ ಎಂದಿದ್ದಾರೆ.

   ಸೋಮಣ್ಣ, ಯತ್ನಾಳ್ ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ಯತ್ನಾಳ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಪಕ್ಷದ ವರಿಷ್ಠರು ಮತ್ತು ಇತರ ನಾಯಕರು ಅವರೊಂದಿಗೆ ಮಾತನಾಡುತ್ತಾರೆ ಎಂಬ ವಿಶ್ವಾಸವಿದೆ. ನಾನೇ ಖುದ್ದಾಗಿ ಹೋಗಿ ಅವರನ್ನು ಭೇಟಿ ಮಾಡುತ್ತೇನೆ, ಆದರೆ ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆದರೆ ಇತ್ಯರ್ಥವಾಗುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

    ಈ ತಿಂಗಳ 23, 24, 25 ರಂದು ನವದೆಹಲಿಗೆ ಭೇಟಿ ನೀಡಿ ಮೋದಿ, ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡುವುದಾಗಿ ವಿಜಯೇಂದ್ರ ಹೇಳಿದರು. ನವೆಂಬರ್ 25 ರಂದು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರು ಸಂಭ್ರಮಾಚರಣೆ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಇನ್ನೂ ಯಾವುದನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

    ಮೋದಿ ಪರವಾದ ಅಲೆ ಇದೆ. ಕೆಲವು ಅರೆಬೆಂದ ಗ್ಯಾರಂಟಿಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್ ಸರ್ಕಾರ ಏನು ನೀಡುತ್ತದೆ? ಜನರು ನಿರಾಸೆಗೊಂಡಿದ್ದಾರೆ . ಕೇಂದ್ರವನ್ನು ದೂಷಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಯಾವ ಹೊಸ ಕಾರ್ಯಕ್ರಮವನ್ನು ರಾಜ್ಯಕ್ಕೆ ನೀಡಿದೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

    ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಪ್ರಶ್ನೆಗೆ, ಕಾದು ನೋಡಿ ಎಂದು ವಿಶ್ವಾಸದಿಂದ ಹೇಳಿದರು. ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಿರಿಯ ನಾಯಕರು ಗೈರಾಗಿರುವುದು ಅಸಮಾಧಾನದ ಸಂಕೇತವಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ನಾವೆಲ್ಲರೂ ಒಟ್ಟಾಗಿ  ಹೋಗುವ  ವಿಶ್ವಾಸವಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap