ಮಂಡ್ಯ:
ಮುಂಗಾರು ಮಳೆ ಕೈಕೊಟ್ಟಿರುವ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ವಿವಾದ ಭುಗಿಲೆದ್ದಿದೆ. ನಿನ್ನೆ ಮಂಗಳವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಹೇಳಿದಷ್ಟೇ ನೀರು ಬಿಡಬೇಕು, ಮಂಗಳವಾರದಿಂದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಇದರಿಂದ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ನಿನ್ನೆ ಕೆಆರ್ಎಸ್ ಜಲಾಯಶದಿಂದ ಎರಡು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಸಾಯಂಕಾಲದ ಹೊತ್ತಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿನಿತ್ಯ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ರಾತ್ರಿ ಜಲಾಶಯದಿಂದ ಕಾವೇರಿ ನದಿಗೆ 4,448 ಕ್ಯೂಸೆಕ್ ನೀರು ಬಿಡುಗಡೆ ಮಾಡಿದೆ. 15 ದಿನಗಳ ಕಾಲ ನೀರು ಹೀಗೆ ಹರಿಸಿದರೆ ಡ್ಯಾಮ್ ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ.
ರಾತ್ರೋರಾತ್ರಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಂಡ್ಯ ರೈತರು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಹೋರಾಟದ ರೂಪರೇಷು ಕುರಿತು ಸಭೆ ಇಂದು ರೈತರು ಸಭೆ ನಡೆಸಲಿದ್ದಾರೆ. ಕೆಆರ್ಎಸ್ ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿ ಇದ್ದು, ಸದ್ಯ ಜಲಾಶಯದಲ್ಲಿ 101.58 ಅಡಿ ನೀರು ಸಂಗ್ರಹವಾಗಿದೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ ಕೆ ಶಿವಕುಮಾರ್, ಕರ್ನಾಟಕದ ಮುಂದಿನ ಕಾನೂನು ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ನಾಳೆ ದೆಹಲಿಗೆ ಹೋಗಿ ರಾಜ್ಯ ಕಾನೂನು ತಜ್ಞರ ತಂಡವನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಶುಕ್ರವಾರ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆ ನಡೆಯಲಿದೆ.
ತಮಿಳು ನಾಡು ಈ ಹಿಂದೆ 24 ಟಿಎಂಸಿ ನೀರು ಬಿಡಬೇಕೆಂದು ಕೇಳಿತ್ತು. ಅದಕ್ಕೆ ನಮ್ಮ ರಾಜ್ಯದ ಕಾನೂನು ತಂಡದವರು ಚೆನ್ನಾಗಿ ವಾದ ಮಂಡಿಸಿ 3 ಸಾವಿರ ಕೊಡುತ್ತೇವೆ ಎಂದು ಹೇಳಿದರು. ಕೊನೆಗೆ 5 ಸಾವಿರ ಟಿಎಂಸಿ ನೀಡಲು ಕಾವೇರಿ ನಿರ್ವಹಣಾ ಸಮಿತಿ ಒಪ್ಪಿದ್ದಾರೆ. ಇನ್ನು ಎಷ್ಟು ರಕ್ಷಣೆ ಮಾಡಲು ಸಾಧ್ಯವಿದೆ ಎಂದು ನಮ್ಮ ವಕೀಲರ ಜೊತೆ ಚರ್ಚಿಸಿ ಸರ್ಕಾರದ ಚಿಂತನೆ, ವಾಸ್ತವಾಂಶವನ್ನು ನಾನು ಮತ್ತು ನಮ್ಮ ಇಲಾಖೆಯ ಅಧಿಕಾರಿಗಳು ತೀರ್ಮಾನ ಮಾಡಲಿದ್ದೇವೆ ಎಂದರು.
ಕಷ್ಟಕಾಲದಲ್ಲಿ ನಮ್ಮ ರೈತರ ಹಿತ ಕಾಪಾಡುವುದು ಸರ್ಕಾರಕ್ಕೆ ಮುಖ್ಯವಾಗಿದೆ. ಹೀಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ