ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಅವಧಿಯ ಹಗರಣಗಳ ತನಿಖೆಗೆ ಆಯೋಗ ರಚನೆ : ಸಿದ್ದರಾಮಯ್ಯ

ಬೆಂಗಳೂರು

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ತನಿಖೆಗೆ ಆಯೋಗ ರಚಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಚುನಾವಣೆಗೆ ದುಡ್ಡು ಮಾಡಲು ಸರ್ಕಾರ ಕಾನೂನು ಬಾಹಿರ ಕೆಲಸಕ್ಕಿಳಿದಿದೆ ಎಂದು ದೂರಿದರು.

    ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ದುಡ್ಡು ಮಾಡುವುದು ಇದರ ಉದ್ದೇಶ.

    ಮಂತ್ರಿ ಆಗದೆ ಇರುವುದರಿಂದ ಅಸಮಾಧಾನ ಇರುವ ಶಾಸಕರಿಗೆ ದುಡ್ಡು ಮಾಡಿಕೊಡಲು ತರಾತುರಿಯಲ್ಲಿ ಕೆಬಿಜೆಎಲ್ ನಲ್ಲಿ, ವಿಶ್ವೇರಯ್ಯ ನೀರಾವರಿ ನಿಗಮದಲ್ಲಿ, ಕರ್ನಾಟಕ ನೀರಾವರಿ ನಿಗಮದಲ್ಲಿ ಸಭೆಯನ್ನು ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯಲಾಗುತ್ತಿದೆ. ಇದರಲ್ಲಿ ಪಾರದರ್ಶಕತೆ ಇಲ್ಲ. ಟೆಂಡರ್ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ.ಇದು ನಲವತ್ತು ಪರ್ಸೆಂಟ್ ಕಮಿಷನ್ ನ ಮುಂದುವರೆದ ಭಾಗ ಎಂದು ದೂರಿದರು.

    ಜನರ ತೆರಿಗೆ ಹಣವನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ಇವರು ಟೆಂಡರ್ ಹಣವನ್ನು ಹೆಚ್ಚು ಮಾಡಿದ್ದಾರೆ, ಯಾರು ಹೆಚ್ಚು ಕಮಿಷನ್ ನೀಡುತ್ತಾರೋ ಅವರಿಗೆ ಕಾಮಗಾರಿ ಕೊಡುತ್ತಿದ್ದಾರೆ, ತಮಗೆ ಬೇಕಾದ ಗುತ್ತಿಗೆದಾರರನ್ನು ಹುಡುಕಿ ಕೆಲಸ ನೀಡುತ್ತಿದ್ದಾರೆ.ಹೀಗೆ ಮಾಡಿ ಕಮಿಷನ್ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.

   ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 20,000 ಕೋಟಿ ರೂ ಬಾಕಿ ಬಿಲ್ ಇದೆ. ಹತ್ತು ಪರ್ಸೆಂಟ್ ಕಮಿಷನ್ ಕೊಟ್ಟವರಿಗೆ ದುಡ್ಡು ಕೊಡುವ ನಡೆಯುತ್ತಿದೆ, ಇದು ಮುಖ್ಯಮಂತ್ರಿ ಕಚೇರಿಯಿಂದಲೇ ಆರಂಭವಾಗಿದ್ದು ಇದನ್ನು ತಡೆಗಟ್ಟಬೇಕಾದದ್ದು ಅಗತ್ಯ. ಇದನ್ನು ಸದನದಲ್ಲಿ ಕೂಡ ಪ್ರಸ್ತಾಪ ಮಾಡುತ್ತೇವೆ ಎಂದರು.

   ಸರ್ಕಾರಕ್ಕೆ, ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ, ಮುಂದೆ ಕಾನೂನುಬಾಹಿರವಾಗಿ ಈ ರೀತಿ ಮಾಡಿದರೆ ನೀವು ಸಿಕ್ಕಿಹಾಕಿಕೊಳ್ಳುತ್ತೀರಿ,ಈ ವಿಚಾರವನ್ನು ತಾತ್ವಿಕ ಅಂತ್ಯ ಕಾಣಿಸುವವರೆಗೆ ನಾವು ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.

   ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಆರಂಭವಾಗಿದೆ, ಹೀಗಾಗಿ ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾವು ತನಿಖಾ ಆಯೋಗ ರಚನೆ ಮಾಡಿ ಎಲ್ಲವನ್ನೂ ತನಿಖೆ ಮಾಡಿಸಿ, ಯಾರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಇದಕ್ಕೆ ಪೂರಕವಾಗಿ ಗೂಳಿಹಟ್ಟಿ ಶೇಖರ್ ಅವರು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕೆಬಿಜೆಎನ್‌ಎಲ್, ವಿಜಿಜೆಎಎನ್‌ಎಲ್, ಕೆಎನ್‌ಎನ್‌ಎಲ್ ಹೀಗೆ ಹಲವು ನೀರಾವರಿ ನಿಗಮಗಳಲ್ಲಿ ಅಕ್ರಮವಾಗಿ ನಡವಳಿಕೆಗಳನ್ನು ಮಾಡಿಕೊಂಡು ಒಂದೇ ದಿನ ಸುಮಾರು 18,000 ಕೋಟಿಗೆ ನೀಡಿರುವ ಟೆಂಡರ್, ವರ್ಕ್ ಆರ್ಡರ್ ಗೆ ನೀಡಿರುವ ರದ್ದುಪಡಿಸಿ ಮರು ಟೆಂಡರ್ ಗೆ ಆದೇಶ ನೀಡಿರುವುದನ್ನು ರದ್ದು ಮಾಡಬೇಕು ಎಂದು ಪತ್ರ ಬರೆದಿದ್ದಾರೆ.

   ಈ ರೀತಿ ಎಲ್ಲಾ ಶಾಸಕರು ಹೇಳಿದ್ದಾರೆ, ಚುನಾವಣೆ ಕಾಲ ಬಂದಿರುವುದರಿAದ ಹಣ ಸಂಗ್ರಹ ಮಾಡಿಕೊಳ್ಳಲು ರಾಜ್ಯದ ಖಜಾನೆಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಪ್ರತೀ ಓಟಿಗೆ 6000 ರೂ. ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇಂಥ ಕೆಟ್ಟ ರಾಜಕೀಯವನ್ನು ನಾನು ಎಂದೂ ನೋಡಿರಲಿಲ್ಲ. ಇದನ್ನು ತಡೆಗಟ್ಟದೆ ಹೋದರೆ ರಾಜ್ಯ ಉಳಿಯುವುದಿಲ್ಲ.

    ಹೀಗಾಗಿ ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಸುದ್ದಿಗೋಷ್ಠಿ ಮಾಡಿದ್ದೇವೆ.ಮಾತೆತ್ತಿದರೆ ದಾಖಲೆ ಕೊಡಿ ಎಂದು ಕೇಳುತ್ತಾರೆ, ಗೂಳಿಹಟ್ಟಿ ಶೇಖರ್ ಅವರು ಬರೆದಿರುವ ಪತ್ರ ದಾಖಲೆಯಲ್ಲವೇ? ಯತ್ನಾಳ್, ವಿಶ್ವನಾಥ್, ಮಠಾಧೀಶರು ಹೇಳುವ ಮಾತುಗಳು ದಾಖಲೆಯಲ್ವಾ? ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಪ್ರತಿಯೊಂದಕ್ಕೂ ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರಲಿಲ್ವಾ ಅನ್ನುತ್ತಾರೆ. ಇಂಥಾ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಬಂದಿರಲಿಲ್ಲ.

   ಬಸವರಾಜ ಬೊಮ್ಮಾಯಿ ಅವರೇ ಈ ಸರ್ಕಾರದ ಮುಖ್ಯಸ್ಥರು. ಅವರ ಕಚೇರಿಯಿಂದಲೇ ಇವೆಲ್ಲ ಆರಂಭವಾಗುವುದು. ನಿಗಮಗಳ ಬೋರ್ಡ್ ಮೀಟಿಂಗ್ ಗಳು ನಡೆಯುವುದು ಅವರ ಅಧ್ಯಕ್ಷತೆ ಯಲ್ಲಿಯೇ. ಟೆಂಡರ್ ಕರೆದು ಅದರ ಮೊತ್ತವನ್ನು ಇವರೇ ಹೇಳಿಕೊಟ್ಟು ಹೆಚ್ಚು ಮಾಡಿಸಿ, ಲಂಚವನ್ನು ಪಡೆಯುತ್ತಿದ್ದಾರೆ ಎಂದರು.

  ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap