ಗೃಹಜ್ಯೋತಿ ಸಬ್ಸಿಡಿ : ಗ್ರಾಹಕರಿಂದ ವಸೂಲಿ ಮಾಡಲ್ಲ; ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು:

   ಗೃಹ ಜ್ಯೋತಿಯ ಸಹಾಯಧನವನ್ನು ಸರ್ಕಾರ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸುತ್ತಿದ್ದು, ಗ್ರಾಹಕರಿಂದ ಹಣ ಪಡೆಯುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.ಈ ಕುರಿತು ನಗರದ ಬೆಳಕು ಭವನದಲ್ಲಿ ಸೋಮವಾರ (ಫೆ.24) ಆಯೋಜಿಸಿದ್ದ ಇಲಾಖೆಯ ಸಭೆಯ ನಂತರ ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾಹಿತಿ ನೀಡಿದರು.

   ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸದಿದ್ದರೆ ಜನರಿಂದ ಪಡೆಯಲು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಇಂಧನ ಸರಬರಾಜು ನಿಗಮ ಲಿಮಿಟೆಡ್ (ಎಸ್ಕಾಂ) ಮನವಿ ಮಾಡಿವೆ ಎಂಬುದು ವದಂತಿಯಷ್ಟೇ. ಗೃಹ ಜ್ಯೋತಿಯ ಸಹಾಯಧನವನ್ನು ಸರ್ಕಾರ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸುತ್ತಿದೆ. ಹೀಗಾಗಿ ಗ್ರಾಹಕರಿಂದ ವಸೂಲಿ ಮಾಡುವ ಯಾವುದೇ ಪ್ರಸ್ತಾಪಗಳು ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

   ಗೃಹಜ್ಯೋತಿ ಯೋಜನೆ ಘೋಷಣೆ ಸಂದರ್ಭದಲ್ಲೇ, ಗೃಹ ಬಳಕೆದಾರರಿಗೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಸುವುದಾಗಿ ಸರ್ಕಾರ ಹೇಳಿತ್ತು. ಸಬ್ಸಿಡಿ ಮೊತ್ತವನ್ನು ಸರ್ಕಾರದಿಂದಲೇ ಪಾವತಿ ಮಾಡುವುದಾಗಿಯೂ ಹೇಳಲಾಗಿತ್ತು. ಅದರಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಫೆ. 2025ರವರೆಗಿನ ಗೃಹಜ್ಯೋತಿ ಯೋಜನೆ ಸಹಾಯಧನವನ್ನು ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೆ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

   ಕೆಇಆರ್‌ಸಿ (ಸಹಾಯಧನ ಪಾವತಿ ವಿಧಾನ) ನಿಯಮ 2008ರಲ್ಲಿ ವಿದ್ಯುತ್ ಯೋಜನೆಗಳ ಸಹಾಯಧನವು ರಾಜ್ಯ ಸರಕಾರದಿಂದ ಮುಂಗಡವಾಗಿ ಪಾವತಿಯಾಗದಿದ್ದರೆ ಗ್ರಾಹಕರಿಂದ ಪಡೆಯಲು ಎಸ್ಕಾಂಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಸಾಮಾನ್ಯ ನಿಯಮವನ್ನೇ ತಪ್ಪಾಗಿ ಗ್ರಹಿಸಲಾಗಿದೆ. 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಯಾವುದೇ ಗೊಂದಲವಿಲ್ಲದೆ ಮುಂದುವರಿಸಿಕೊಂಡು ಹೋಗಲು ಇಂಧನ ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link