ವಾಸಿಂಗ್ಟನ್:
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಎರಡೂ ದೇಶಗಳಿಂದ ಪರಮಾಣು ದಾಳಿಯಾದರೆ ಉಂಟಾಗುವ ಸಮಸ್ಯೆ ಬಗ್ಗೆ ನಮಗೆ ಕಳವಳವಿದೆ. ಆದರೆ ಯದ್ಧದ ವಿಚಾರದಲ್ಲಿ ಅಮೆರಿಕ ಭಾಗಿಯಾಗುವುದಿಲ್ಲ, ಮೂಲಭೂತವಾಗಿ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಮಾಧ್ಯಗಳ ಜತೆ ಮಾತನಾಡಿದ ಜೆ.ಡಿ. ವ್ಯಾನ್ಸ್, ‘ನಾವು ಯಾವ ದೇಶವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಈ ದಾಳಿಯನ್ನು ಕಡಿಮೆ ಮಾಡಲು ನಾವು ಏನೆಲ್ಲ ಪ್ರಯತ್ನ ಮಾಡಬಹುದೋ ಅದನ್ನು ಮಾಡುತ್ತೇವೆ. ಆದರೆ ಯುದ್ಧದಲ್ಲಿ ನಾವು ಭಾಗಿಯಾಗುವುದಿಲ್ಲ. ಅದು ನಮಗೆ ಸಂಬಂಧವಿಲ್ಲ. ಅಮೆರಿಕದ ನಿಯಂತ್ರಣ ಸಾಮರ್ಥ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.
‘ಶಸ್ತ್ರಾಸ್ತ್ರ ತ್ಯಜಿಸುವಂತೆ ಭಾರತಕ್ಕಾಗಲೀ ಪಾಕಿಸ್ತಾನಕ್ಕಾಗಲೀ ಅಮೆರಿಕ ಹೇಳಲು ಸಾಧ್ಯವಿಲ್ಲ. ಉಭಯ ದೇಶಗಳ ಈ ಸಂಘರ್ಷ ಅಣ್ವಸ್ತ್ರ ಸಮರಕ್ಕೆ ಎಡೆಮಾಡಿಕೊಡದಿರಲಿ ಎಂಬುದು ನಮ್ಮ ಆಶಯವಾಗಿದೆ. ಖಂಡಿತವಾಗಿಯೂ ನಾವು ಈ ಬಗ್ಗೆ ಚಿಂತಿತರಾಗಿದ್ದೇವೆ. ಒಂದು ವೇಳೆ ಪರಮಾಣು ಯುದ್ಧವಾದಲ್ಲಿ ದೊಡ್ಡ ಹಾನಿಯುಂಟಾಗುತ್ತದೆ’ ಎಂದು ವ್ಯಾನ್ಸ್ ಹೇಳಿದ್ದಾರೆ.
ಯುದ್ಧದ ಭೀತಿ ಇರುವ ಕಾರಣ ಇಸ್ರೇಲ್, ಸಿಂಗಾಪುರ ಮತ್ತು ಅಮೆರಿಕ ತಮ್ಮ ನಾಗರಿಕರಿಗೆ ಕಾಶ್ಮೀರ ಮತ್ತು ಪಾಕಿಸ್ತಾನವನ್ನು ತುರ್ತಾಗಿ ತೊರೆಯುವಂತೆ ಸೂಚಿಸಿವೆ. ಲಾಹೋರ್‌ನಲ್ಲಿ ಡ್ರೋನ್ ಸ್ಫೋಟವಾದ ಬೆನ್ನಲ್ಲೇ, ‘ಆ ಪ್ರದೇಶವನ್ನು ತೊರೆಯಿರಿ ಅಥವಾ ಸುರಕ್ಷಿತ ಸ್ಥಳಗಳಿಗೆ ಹೋಗಿ’ ಎಂದು ಅಮೆರಿಕ ತನ್ನ ಅಧಿಕಾರಿಗಳು ಮತ್ತು ನಾಗರಿಕರಿಗೆ ಹೇಳಿದೆ.
ಪಾಕಿಸ್ತಾನಿ ಉಗ್ರರ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು(ಭಾರತದ ದಾಳಿ) ನಾಚಿಗೇಡು. ಏನೋಒಂದು ಆಗಲಿದೆ ಎಂದು ಜನರಿಗೆ ಅಂದಾಜು ಇತ್ತೆಂದು ಕಾಣುತ್ತದೆ. ಅವರು(ಭಾರತ ಮತ್ತು ಪಾಕ್) ಶತಮಾನಗಳಿಂದ ಹೊಡೆದಾಡುತ್ತಿದ್ದಾರೆ. ಇದು ಆದಷ್ಟು ಬೇಗ ಕೊನೆಗೊಳ್ಳಲಿ’ ಎಂದು ಟ್ರಂಪ್ ಹೇಳಿದ್ದರು.
