ಭಂಡಾರಾ:
ಭಂಡಾರಾ ಜಿಲ್ಲೆಯ ಸಾಕೋಲಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಈ ಗೊಂದಲವನ್ನು ಹರಡುತ್ತಿದೆ. ಬಿಜೆಪಿ ಎಂದಿಗೂ ಮೀಸಲಾತಿಯನ್ನು ರದ್ದು ಗೊಳಿಸುವುದಿಲ್ಲ. ನಮಗೆ ಈಗ ಬಹುಮತವಿದ್ದು, ಮೀಸಲಾತಿ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ.
ಈಗ 370 ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ ಮತ್ತು ತ್ರಿವಳಿ ತಲಾಖ್ ಕೊನೆಗೊಳಿಸಿದ್ದೇವೆ ಆದರೆ ಮೀಸಲಾತಿಯನ್ನು ರದ್ದುಗೊಳಿಸಲಿಲ್ಲ. ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ ಎಂಬುದು ನರೇಂದ್ರ ಮೋದಿಯವರ ಗ್ಯಾರಂಟಿಯಾಗಿದೆ ಎಂದರು.
“70 ವರ್ಷಗಳಲ್ಲಿ ಕಾಂಗ್ರೆಸ್ 370 ನೇ ವಿಧಿಯನ್ನು ರದ್ದುಗೊಳಿಸಲಿಲ್ಲ. ಆದರೆ ನಾವು ಅದನ್ನು ತೆಗೆದು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದಿದ್ದೇವೆ. ರಾಮಮಂದಿರ ವಿಚಾರವನ್ನು ಕಾಂಗ್ರೆಸ್ ವರ್ಷಗಳ ಕಾಲ ಎಳೆದಾಡುತ್ತಾ ಬಂದಿತ್ತು. ರಾಮಮಂದಿರ ನಿರ್ಮಾಣದ ಭರವಸೆಯನ್ನೂ ಮೋದಿ ಈಡೇರಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ, 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಮನೆಗಳಿಗೆ ಅನಿಲ ಸಂಪರ್ಕ, ಬಡವರ ಮನೆಗಳಿಗೆ ಉಚಿತ ವಿದ್ಯುತ್ ಭರವಸೆಯನ್ನು ಬಿಜೆಪಿ ಈಡೇರಿಸಲು ಜನರು ಮೂರನೇ ಅವಧಿಗೆ ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಐದು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ ಮತ್ತು ಅವರನ್ನು ನಿರಂತರವಾಗಿ ಅವಮಾನಿಸಿತು. ಬಾಬಾಸಾಹೇಬರಿಗೆ ಸಂಬಂಧಿಸಿದ ಐದು ಸ್ಥಳಗಳಿಗೂ ಬಿಜೆಪಿ ಸರಕಾರ ಪಾವಿತ್ರ್ಯತೆ ನೀಡಿದೆ ಎಂದು ಅಮಿತ್ ಶಾ ಹೇಳಿದರು.