ಉದ್ಯಮ‌ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಎಲ್ಲಾ ಸಹಕಾರ ಮತ್ತು ನೆರವು :ಸಿಎಂ

ಬೆಂಗಳೂರು:

     ಜೆ ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಮ‌ ಕ್ಷೇತ್ರದ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾದ ಎಲ್ಲಾ ಸಹಕಾರ ಮತ್ತು ನೆರವನ್ನು ನೀಡುತ್ತದೆ. ಕಾರ್ಪೋರೇಟ್ ಸಂಸ್ಥೆಗಳು ಮತ್ತು ಉದ್ಯಮ ಕ್ಷೇತ್ರ ಸರ್ಕಾರದ ಜತೆಗೆ ಸಮಾಜದ ಪ್ರಗತಿಗೆ ಕೈ ಜೋಡಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ನೀವು ಸಮಾಜದ ಮತ್ತು ಉದ್ಯಮ ಕ್ಷೇತ್ರದ ಆರೋಗ್ಯಕರ ಪ್ರಗತಿಗೆ ಮುಂದಾಗಿ ಎಂದು ಕರೆ ನೀಡಿದರು.

    ಈ ಹೊತ್ತಿನ ತಂತ್ರಜ್ಞಾನ ಮತ್ತು ಉತ್ಪಾದನೆಗೆ ಅಗತ್ಯವಾದ ಕೌಶಲ್ಯ ವೃದ್ಧಿಸಲು ಸರ್ಕಾರ ತೀರ್ಮಾನಿಸಿದೆ. ಆ ಮೂಲಕ ಉದ್ಯಮ ಜಗತ್ತಿಗೆ ಅಗತ್ಯವಾದ ಕೌಶಲ್ಯಾಧಾರಿತ ಯುವ ಸಮೂಹವನ್ನು ಸೃಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.     

    ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಪ್ರಭುತ್ವದ ಮೇಲೆ ನಿಂತಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಹೀಗಾಗಿ ಸಾಮಾಜಿಕ ಪ್ರಭುತ್ವದ ಮೂಲಕ ಅರ್ಥಪೂರ್ಣ ರಾಜಕೀಯ ಸ್ವಾತಂತ್ರ್ಯ ಧಕ್ಕಿಸಿಕೊಳ್ಳಲು ಅಕ್ಷರ ವಂಚಿತರಿಗೆ ಶಿಕ್ಷಣ ದೊರಕಿಸುವ ಅಗತ್ಯವಿದೆ. ನಿಮಗೆ ಉತ್ತಮ ಶಿಕ್ಷಣ ಸಿಕ್ಕಿದ್ದರಿಂದಲೇ ನೀವು ಉದ್ಯಮಪತಿಗಳಾಗಲು, ಆರ್ಥಿಕವಾಗಿ ದೇಶಕ್ಕೆ ಕೊಡುಗೆ ಕೊಡಲು ಸಾಧ್ಯವಾಗಿದೆ. ಸ್ವಾಭಿಮಾನದಿಂದ ಬದುಕಲು ಆರ್ಥಿಕ, ಸಾಮಾಜಿಕ ಅವಕಾಶಗಳು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.

    ಬಡವ ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದಲೇ ಸಾರ್ವತ್ರಿಕ ಮೂಲ ಆದಾಯ ಎನ್ನುವ ತತ್ವದ ಅಡಿಯಲ್ಲಿ  ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತಿದೆ. ಇದೇ ಆಶಯದ ಅಡಿಯಲ್ಲಿ ಆಯವ್ಯಯವನ್ನು ರೂಪಿಸಲಾಗಿದ್ದು,  ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರಿಗೂ ಅನ್ವಯ ಆಗುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಮುಂದಾಗಿದ್ದೇವೆ. ಇದರಿಂದಾಗಿ ಆರ್ಥಿಕತೆಗೆ ಹೊಸ ಚೈತನ್ಯ ಮತ್ತು ಶಕ್ತಿ ಬಂದಿದೆ. ನಾಡಿನ ಮಹಿಳೆಯರಿಗೆ ಆರ್ಥಿಕ‌ ಸಫಲತೆ ಬಂದಿದೆ. ಹಸಿವಿನಿಂದ ಮಲಗುವವರು ಇಲ್ಲವಾಗಿದೆ. ಬಾಲ ಕಾರ್ಮಿಕ ಪದ್ಧತಿ ನಶಿಸಲು ನಮ್ಮ ಕಾರ್ಯಕ್ರಮ ಮತ್ತು ಗ್ಯಾರಂಟಿಗಳು ನೆರವಾಗುತ್ತಿವೆ ಎಂದರು. 

     ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ,ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್ , ಜಿ.ಪರಮೇಶ್ವರ್, ಶರಣಪ್ರಕಾಶ್ ಪಾಟೀಲ್, ಡಿ.ಸುಧಾಕರ್ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರಾದ  ಗೋವಿಂದರಾಜ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap