ಕಾಂಗ್ರೆಸ್ 141 ಸ್ಥಾನಗಳಲ್ಲಿ ಗೆಲುವು ಖಚಿತ : ಡಿಕೆಶಿ

ಬೆಂಗಳೂರು

     ತಮಗೆ ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ. ತಮ್ಮ ಪ್ರಕಾರ ಕಾಂಗ್ರೆಸ್ 141 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಸಮೀಕ್ಷೆಯಲ್ಲಿ ಎಕ್ಸಿಟ್ ಪೋಲ್ ಸಮೀಕ್ಷೆಗಿಂತ ಹೆಚ್ಚು ಮಾದರಿಗಳಿಂದ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಕಾಂಗ್ರೆಸ್ ಪರವಾಗಿ ದೊಡ್ಡ ಅಲೆ ಇದೆ. ಎಕ್ಸಿಟ್ ಪೋಲ್ ಸಮೀಕ್ಷೆಗಿಂತ ಹೆಚ್ಚಿನ ಸ್ಥಾನ ಪಡೆಯಲಿದೆಯೇ ಹೊರತು ಕಡಿಮೆ ಆಗಲೂ ಸಾಧ್ಯವಿಲ್ಲ. ಎಕ್ಸಿಟ್ ಪೋಲ್ ನಲ್ಲಿ ನಮ್ಮ ಪರ ವಿಶ್ವಾಸ ತೋರಿದ್ದು ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಬರಲಿದೆ ಎಂಬುದು ನಮ್ಮ ನಂಬಿಕೆ ಎಂದರು.

    ತಾವು ಸ್ಥಳೀಯವಾಗಿ ಓಡಾಟ ಮಾಡಿದ್ದು, ಬಿಜೆಪಿ ಪ್ರತಿ ಕ್ಷೇತ್ರದಲ್ಲಿ ಎಷ್ಟೇ ದುಡ್ಡು ಸುರಿಸಿರಬಹುದು, ಎಷ್ಟೇ ದೊಡ್ಡ ನಾಯಕರು ಬಂದು ಪ್ರಚಾರ ಮಾಡಿರಬಹುದು. ಆವರೆ ಮತ ಎಂಬುದು ಬುಲೆಟ್ ಗಿಂತ ಶಕ್ತಿಶಾಲಿ ಯಾಗಿದೆ.

    ಈ ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಡಲು ಹೇಗೆ ಜನ ಬ್ರಿಟೀಷರ ಗುಂಡಿಗೆ ಹೆದರಲಿಲ್ಲವೋ, ಅದೇ ರೀತಿ ಜನ ಡಬಲ್ ಇಂಜಿನ್ ಸರ್ಕಾರ, ದುರಾಡಳಿತ, ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಂಡಿದ್ದರು. ಇದ್ಯಾವುದಕ್ಕೂ ಹೆದರಲಿಲ್ಲ. ಜನ ತಮ್ಮ ನಿರ್ಧಾರ ಬದಲಿಸುವುದಿಲ್ಲ ಎಂದರು. ಅತಂತ್ರ ವಿಧಾನಸಭೆ ನಿರ್ಮಾಣಾ ಆಗಬಹುದು ಎಂಬ ಕಾರಣಕ್ಕೆ ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದ್ದು, ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹೋಗುವ ಮುನ್ನ ನಾನು ಮೈತ್ರಿಗೆ ಸಿದ್ಧ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಯಾವ ತೆರೆಮರೆ ಪ್ರಯತ್ನವೂ ಇಲ್ಲ. ಇಷ್ಟು ದಿನ ಅವರು ತಮಗೆ ಬಹುಮತ ಬರಲಿದೆ ಎಂದು ಹೇಳುತ್ತಿದ್ದರು. ಅವರು ಯಾರ ಜತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವೋ ಗೊತ್ತಿಲ್ಲ’ ಎಂದು ತಿಳಿಸಿದರು.

     ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಬಹುಮತ ಬಾರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದರು ಎಂದು ಕೇಳಿದಾಗ, ‘ಕುಮಾರಣ್ಣ ಅವರು ಯಾವ ಲೆಕ್ಕಾಚಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವಂತೂ ಆರೋಗ್ಯ ಉತ್ತಮವಾಗಿ ಇರುವವರೆಗೂ ನಿವೃತ್ತಿ ಪಡೆಯುವುದಿಲ್ಲ. ದಳದ ಕಾರ್ಯಕರ್ತರು ಸಮಯ ವ್ಯರ್ಥ ಮಾಡದೆ ನಮ್ಮ ಜತೆ ಸೇರಿಕೊಳ್ಳಲಿ ಎಂದು ಹೇಳಿದ್ದೇನೆ. ಇಂದು ಅದನ್ನೇ ಹೇಳುತ್ತೇನೆ’ ಎಂದು ತಿಳಿಸಿದರು. ಕುಮಾರಸ್ವಾಮಿ ಅವರು ಹೊರದೇಶಕ್ಕೆ ಹೋಗಿರುವ ಹಿಂದೆ ಬೇರೆ ಸಾಧ್ಯತೆಗಳೇನಾದರೂ ಇದೆಯೇ ಎಂದು ಕೇಳಿದ ಪ್ರಶ್ನೆಗೆ, ‘ಅವರ ಲೆಕ್ಕಾಚಾರದ ಬಗ್ಗೆ ನಾನು ಯಾಕೆ ಮಾತನಾಡಲಿ, ನನಗೂ ಆರೋಗ್ಯ ಸ್ವಲ್ಪ ವ್ಯತ್ಯಾಸ ಆಗಿದೆ. ಅವರು ಆರೋಗ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿದ್ದಾರೆ. ವಿಶ್ರಾಂತಿ ಪಡೆಯಲಿ. ನಾನು ವಿಶ್ರಾಂತಿ ಪಡೆಯಲು ಹೊರಗೆ ಹೋಗಬೇಕು ಅಂದುಕೊಂಡಿದ್ದೆ, ನಮ್ಮಲ್ಲಿ ಬೇಡ ಎನ್ನುತ್ತಿದ್ದಾರೆ’ ಎಂದು ತಿಳಿಸಿದರು.

    ‘ಬಿಜೆಪಿಯವರು ಎಷ್ಟೇ ಸೀಟು ಬಂದರು ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದು ಅವರ ಭ್ರಮೆ. ಎಲ್ಲಾ ಪಕ್ಷದವರು ತಮ್ಮ ಪಕ್ಷದ ನಾಯಕರನ್ನು ಒಂದು ಕಡೆ ಸೇರಿಸಿ ವಿಶ್ರಾಂತಿ ಪಡೆದು ಚರ್ಚೆ ಮಾಡುತ್ತಾರೆ. ಇದು ಸಹಜ’ ಎಂದು ತಿಳಿಸಿದರು. ಎಕ್ಸಿಟ್ ಪೋಲ್ ಆಧಾರದ ಮೇಲೆ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಮಾಡಲಾಗುತ್ತಿದೆಯೇ ಎಂದು ಕೇಳಿ, ‘ಸದ್ಯಕ್ಕೆ ಯಾವ ಅಧಿಕಾರ ಹಂಚಿಕೆ ಆಗಿಲ್ಲ. ನಮ್ಮ ಹೈಕಮಾಂಡ್, ಮಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಏನು ಹೇಳುತ್ತಾರೋ ಅದೇ ಅಂತಿಮ’ ಎಂದು ಹೇಳಿದರು.

     ಅತಂತ್ರವಾದರೂ ಕಪ್ ನಮ್ಮದೇ ಎಂಬ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕಪುö್ಪ ಹಾಗೂ ಟೋಪಿ ಎಲ್ಲವನ್ನೂ ಅವರೇ ಇಟ್ಟುಕೊಳ್ಳಲಿ’ ಎಂದು ತಿಳಿಸಿದರು. ನೀವು 20 ವರ್ಷಗಳಿಂದ ಕಾಯುತ್ತಿರುವ ಸಮಯ ಬಂದಿದೆಯೇ ಎಂದು ಕೇಳಿದಾಗ, ‘ನಾನು ಶ್ರಮ ಪಟ್ಟಿದ್ದೇನೆ. ಉಪಚುನಾವಣೆಯಲ್ಲಿ ಪಕ್ಷ ಸೋತ ನಂತರ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿದ್ದರಾಮಯ್ಯ ಅವರು ಕೂಡ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ನಂತರ ಸೋನಿಯಾ ಗಾಂಧಿ ಅವರು ನನಗೆ ಈ ಜವಾಬ್ದಾರಿ ನೀಡಿದರು. ನಾನು ಈ ಜವಾಬ್ದಾರಿ ಪಡೆದ ದಿನದಿಂದ ಮಲಗಿಲ್ಲ. ಪಕ್ಷದ ನಾಯಕರು ಕಾರ್ಯಕರ್ತರಿಗೂ ಮಲಗಲು ಬಿಟ್ಟಿಲ್ಲ. ಪಕ್ಷ ಸಂಘಟನೆಗೆ ಏನು ಮಾಡಬೇಕೋ ಮಾಡಿದ್ದೇನೆ. ಎಲ್ಲರೂ ನಮಗೆ ಸಹಕಾರ ನೀಡಿ ಆಶೀರ್ವಾದ ನೀಡುತ್ತಾರೆ. ಉತ್ತಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap