ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಹಿಸಲ್ಲ : ಎಚ್‌ಡಿಕೆ

ಬೆಂಗಳೂರು :

     ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುವವರ ವಿರುದ್ಧ ಪೊಲೀಸರ ದೌರ್ಜನ್ಯ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಿಕೊಳ್ಳದಿದ್ದರೆ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಎಚ್ಚರಿಕೆ ನೀಡಿದರು.

     ಅವರು ಯಲಹಂಕ ನ್ಯೂ ಟೌನ್ ಸೇರಿದಂತೆ ಕ್ಷೇತ್ರದ ಹಲವಾರು ಕಡೆ ಪಂಚರತ್ನ ಯಾತ್ರೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಯಲಹಂಕದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಆಗುತ್ತಿದೆ. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸೇರಲು ಬರುವ ಮುಖಂಡರು, ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ.

    ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಈ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ, ನೀವು ಪ್ರತಿ ತಿಂಗಳು ಸಂಬಳ ಪಡೆಯುವುದು ಜನರ ತೆರಿಗೆ ದುಡ್ಡಿನಿಂದ. ನೀವು ಅವರ ಸೇವೆ ಮಾಡಬೇಕೆ ವಿನಃ ಯಾರೋ ಶಾಸಕ ಹೇಳಿದ್ದಕ್ಕೆಲ್ಲ ತಲೆ ಆಡಿಸುವುದಲ್ಲ. ಇನ್ನೂ ಒಂದೇ ತಿಂಗಳು, ಆಗ ಈ ಸರಕಾರ ಇರಲ್ಲ. ಆಗ ನೀವು ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ. ಕಾರ್ಯಕರ್ತರು, ಮುಖಂಡರು ಹೆದರಬೇಕಿಲ್ಲ, ಯಾವುದೇ ಸಂದರ್ಭ ಬಂದರೂ ನೇರವಾಗಿ ನನ್ನನ್ನು ಸಂಪರ್ಕ ಮಾಡಬಹುದು ಎಂದು ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು. ನನಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಎಲ್ಲರೂ ಸುಖ ಶಾಂತಿಯಿAದ ಇರಬೇಕು ಎಂದು ಬಯಸುವವನು. ಹೀಗಾಗಿ ಇಂಥ ಆಡಳಿತ ಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಯೋಜನೆಗಳ ಹೆಸರಿನಲ್ಲಿ ಲೂಟಿ :
      ಬೆಂಗಳೂರಿನಲ್ಲಿ ಯೋಜನೆಗಳ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ಹೊಡೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಸರಕಾರ ಬಂದರೆ ಇದಕ್ಕೆಲ್ಲಾ ಇತಿಶ್ರೀ ಹಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ರಾಜಧಾನಿ ಬೆಂಗಳೂರಿನಲ್ಲಿ ಬಡವರಿಗೆ ಉಚಿತ ಮನೆ, ಉಚಿತ ಆರೋಗ್ಯ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುವುದು. ಸಾಮಾನ್ಯವಾಗಿ ಬಡ ಮಧ್ಯಮ ವರ್ಗದ ಜನರು ಸಾಲ ಮಾಡುವುದೇ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಮನೆ ಕಟ್ಟುವುದಕ್ಕಾಗಿ. ಮುಂದೆ ಇವರು ಶಾಶ್ವತವಾಗಿ ಸಾಲ ಮಾಡುವುದನ್ನು ತಪ್ಪಿಸುವುದೇ ನನ್ನ ಉದ್ದೇಶ ಎಂದರು ಅವರು.

    ಕ್ಷೇತ್ರದ ಅಭ್ಯರ್ಥಿ ಮುನೇಗೌಡ, ಮಾಜಿ ಶಾಸಕ ಇ. ಕೃಷ್ಣಪ್ಪ, ಪಕ್ಷದ ಯಲಹಂಕ ಕ್ಷೇತ್ರದ ಅಧ್ಯಕ್ಷ ಕೃಷ್ಣಪ್ಪ, ಪಕ್ಷದ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap