ಬೆಂಗಳೂರು:
ರಾಜ್ಯದ ವಾತಾವರಣ ದಿಡೀರ್ ಬದಲಾಗಿದೆ. ಕಳೆದ ವಾರದವರೆಗೂ ಅತಿ ಚಳಿಯಿಂದ ಮರಗಟ್ಟಿಹೋಗಿದ್ದ ರಾಜ್ಯದ ಜನ ನಿಧಾನವಾಗಿ ಬಿಸಿಲಿನ ಧಗೆ ಎದುರಿಸತೊಡಗಿದ್ದಾರೆ. ಈ ಬಾರಿ ಉಷ್ಣದ ಅಲೆ ಬೀಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಫೆಬ್ರವರಿ ತಿಂಗಳಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ರಣಬಿಸಿಲಿನ ಬೇಸಿಗೆ ಇರುವುದು ನಿಚ್ಚಳವಾಗಿದೆ. ಜತೆಗೆ, ಉಷ್ಣ ಅಲೆ ಬೀಸುವ ಎಲ್ಲ ಲಕ್ಷಣ ದಟ್ಟವಾಗಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಕಲಬುರಗಿಯಲ್ಲಿ ಅತಿ ಹೆಚ್ಚು 36.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ 3.6 ಡಿ.ಸೆ. ಅಧಿಕವಾಗಿದೆ. ಅದೇ ರೀತಿ ಬಾಗಲಕೋಟೆಯಲ್ಲಿ 34.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 4.5 ಡಿ.ಸೆ. ಹೆಚ್ಚಾಗಿದೆ. ಇದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಬಿಸಿಲು ದಾಖಲಾಗುತ್ತಿದೆ. ಗರಿಷ್ಠ ಉಷ್ಣಾಂಶದಲ್ಲಿ 2 ರಿಂದ 4 ಡಿ.ಸೆ. ವರೆಗೆ ಹೆಚ್ಚಾಗಿದೆ. ಅದರಲ್ಲೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಬಿಸಿಲು ಹೆಚ್ಚಾಗಿದೆ.
ಇಷ್ಟು ದಿನ ಬಿಸಿಲು ಕಡಿಮೆ ಇತ್ತು. ಇದೀಗ ಗರಿಷ್ಠ ಉಷ್ಣಾಂಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಭಾರೀ ಬಿಸಿಲಿನ ಅನುಭವ ಆಗಲಿದೆ. ಪೂರ್ಣ ಪ್ರಮಾಣದಲ್ಲಿ ಬೇಸಿಗೆ ಶುರುವಾಗುತ್ತಿದಂತೆ ಇನ್ನಷ್ಟು ಹೆಚ್ಚಾಗಲಿದೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಭಾರತೀಯ ಹವಾಮಾನ ಇಲಾಖೆ ದೇಶದ ಎಲ್ಲ ರಾಜ್ಯದ ಅಧಿಕಾರಿಗಳಿಗೆ ಉಷ್ಣ ಅಲೆ ಕುರಿತು ಜಾಗೃತಿ, ಕ್ರಿಯಾಯೋಜನೆ ಸಿದ್ದಪಡಿಸಲು ಕಾರ್ಯಾಗಾರ ನಡೆಸುತ್ತಿದೆ. ಭಾರೀಬಿಸಿಲು ಇದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಬಿಸಿಲಿನ ತಾಪಕ್ಕೆ ಮೋಡ ಕಟ್ಟಿ ಏಕಾಏಕಿ ಮಳೆ ಸುರಿಯುವ ಸಾಧ್ಯತೆಯೂ ಇರಲಿದೆ ಎಂದು ವಿವರಿಸಿದ್ದಾರೆ.