ಆತಂಕದ ನಡುವೆ ಸೊರಗಿದ್ದ ದನಗಳ ಜಾತ್ರೆಗೆ ಕಳೆ

ಮಧುಗಿರಿ:

ದನಗಳ ಜನಗಳ ಬಿಕ್ಕಟ್ಟಿನ ನಡುವೆ ನಡೆಯುವಂತಹ ಜಾತ್ರಾ ಮಹೋತ್ಸವ ಚೆನ್ನ ಎಂಬುದು ಹಿರಿಯರ ಅಂಬೋಣ. ಆದರೆ ಕಳೆದ ಎರಡು ವರ್ಷಗಳಿಂದ ನಡೆಯದ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ದನಗಳ ಜಾತ್ರೆಯು ಈ ಬಾರಿ ಆತಂಕದ ನಡುವೆ ಪ್ರಾರಂಭವಾಗಿದೆ.

ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರೆಯು ಶಿವರಾತ್ರಿ ಹಬ್ಬದ ದಿನದಿಂದ ಆರಂಭವಾಗಿದ್ದು, ಕಳೆದ 6 ದಿನಗಳಿಂದ ದನಗಳ ಮಾರಾಟವು ವಿರಳವಾಗಿರುವುದು ಕಂಡು ಬರುತ್ತಿದೆ. ಸ್ಥಳೀಯರೆ ದನಗಳ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದು, ಹೊರ ಭಾಗದ ಜನರ ಭಾಗವಹಿಸುವಿಕೆ ಮತ್ತು ಮಾರಾಟ ಸಾಮಾನ್ಯವಾಗಿದೆ.

ಕ್ಯಾಮೇನಹಳ್ಳಿ, ಸಿದ್ದಗಂಗೆ ಜಾತ್ರೆಗಳ ನಂತರ ಮಧುಗಿರಿಯ ದನಗಳ ಜಾತ್ರೆ ಆರಂಭವಾಗುತ್ತದೆ. ಆದರೆ ಕಾಲಕ್ಕೆ ತಕ್ಕಂತೆ ಜನರು ಬದಲಾಗಿದ್ದು, ಶಿವರಾತ್ರಿ ಹಬ್ಬ ಕಳೆದ ಹತ್ತು ದಿನಗಳ ನಂತರ ಆರಂಭವಾಗಬೇಕಾದ ದನಗಳ ಜಾತ್ರೆಯು ಈಗ ಒಂದು ವಾರಕ್ಕೆ ಮುಂಚೆಯೇ ಆರಂಭವಾಗಿದೆ. ಇಡೀ ಜಾತ್ರೆಯು ಕೇವಲ ಹನ್ನೊಂದು ದಿನಗಳಿಗೆ ಸೀಮಿತವಾಗಿದ್ದು, ಜಾತ್ರಾ ಕಾರ್ಯಕ್ರಮಗಳ ಆರಂಭಕ್ಕೂ ಮುನ್ನ ದನಗಳ ಜಾತ್ರೆ ಮುಗಿದೇ ಹೋಗುತ್ತಿದೆ.

 

ದನಗಳ ಜಾತ್ರೆಯಿಂದಲೇ ಹೆಸರುವಾಸಿ ಗಳಿಸಿರುವ ದಂಡಿನ ಮಾರಮ್ಮನ ಜಾತ್ರಾಮಹೋತ್ಸವಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ಉತ್ತಮವಾದ ವ್ಯವಸ್ಥೆ ಕಲ್ಪಿಸಿದ್ದು, ರಾತ್ರಿ ಉಳಿದುಕೊಳ್ಳುವ ದನಗಳ ಮಾಲೀಕರಿಗೆ ನೀರಿನ ವ್ಯವಸ್ಥೆ, ಬೆಳಕಿನ ಹಾಗೂ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಲಾಗಿದೆ.

ಲಕ್ಷ ರೂ. ಗಿಂತ ಹೆಚ್ಚು ಬೆಲೆ ಬಾಳುವ ಹೋರಿಗಳ ಮಾರಾಟ ಮಾತ್ರ ಹೆಚ್ಚಾಗಿದೆ. ಅಧಿಕ ಮೌಲ್ಯದ ಉತ್ತಮ ತಳಿಯ ಹಳ್ಳಿಕಾರ್ ಹೋರಿಗಳು ಸುಮಾರು ಎಂಟು ಲಕ್ಷ ರೂ. ಗಳು ಮತ್ತು ಬೀಜದ ಹೋರಿಗಳು ಐದು ಲಕ್ಷ ರೂ. ವರೆಗಿನ ಮೌಲ್ಯದ ದನಗಳು ಜಾತ್ರೆಯಲ್ಲಿ ಕಂಡು ಬಂದಿವೆ.

ಮೊದಲೆಲ್ಲ ದನಗಳ ಜಾತ್ರೆಗೆ ಹಾವೇರಿ, ಬಿಜಾಪುರ, ಬಳ್ಳಾರಿ ರಾಯಚೂರು, ದಾವಣಗೆರೆ, ಚಿತ್ರದುರ್ಗ, ನೆರೆಯ ಆಂಧ್ರ, ತಮಿಳುನಾಡಿನಿಂದ ಹಳ್ಳಿಕಾರ್ ಹೋರಿಗಳನ್ನು ಕೊಂಡುಕೊಳ್ಳಲು ಬರುತ್ತಿದ್ದರು. ಕೊರೋನಾ ಸೋಂಕು ರೋಗದ ಹಿನ್ನೆಲೆಯಲ್ಲಿ ಜಾತ್ರೆ ನಡೆಯುತ್ತೊ ಇಲ್ಲವೋ ಎಂಬ ಆತಂಕದ ನಡುವೆ ಕೊಳ್ಳುವವರ ಸಂಖ್ಯೆಯು ಗಣನೀಯವಾಗಿ ಕುಸಿತಕಂಡಿದೆ.

ಇನ್ನೂ ದೇವಾಲಯದ ಮುಂಭಾಗ ಹಾಗೂ ಅಕ್ಕ-ಪಕ್ಕ ಜಾಗಗಳಿಂದ ಹಿಡಿದು ಮಧುಗಿರಿ ಪಟ್ಟಣದ ಹೊರ ಗ್ರಾಮವಾದ ಹರಿಹರಪುರದವರೆವಿಗೂ ದನಗಳ ಜಾತ್ರಾ ಸಂದಣಿ ಕೂಡುತ್ತಿತ್ತು. ಕಾಲ ಕ್ರಮೇಣ ತೋಟ ತುಡಿಕೆಗಳು ಹಾಗೂ ಬೆಟ್ಟ ಗುಡ್ಡಗಳ ಸಮೀಪದ ಜಮೀನುಗಳು, ಖಾಲಿ ಜಾಗಗಳಲ್ಲಿ ನಿವೇಶನ, ಮನೆಗಳ ನಿರ್ಮಾಣ ವಾಗಿದ್ದರಿಂದ ಮತ್ತು ದನಗಳ ಸಂಖ್ಯೆಯು ಕ್ಷೀಣಿಸತೊಡಗಿರುವುದರಿಂದ ಈಗಿನ ದನಗಳ ಜಾತ್ರೆ ಕೆಲ ಸ್ಥಳಗಳಿಗೆ ಮಾತ್ರ ಸೀಮಿತವಾಗತೊಡಗಿದೆ.

ಈ ಹಿಂದೆ ತಾಲ್ಲೂಕು ಹಾಗೂ ಸುತ್ತ ಮುತ್ತಲ ದನಗಳ ಮಾಲೀಕರು ಸಿಂಗರಿಸಿದ ದನಗಳ ಸಮೇತ ಜಾತ್ರೆಗೆ ಬಂದರೆಂದರೆ ತಾಯಿ ದಂಡಿನ ಮಾರಮ್ಮನ ಪೂಜಾ ಕೈಂಕರ್ಯ ವಿಧಿ ವಿಧಾನಗಳನ್ನು, ಜಾತ್ರಾ ಮಹೋತ್ಸವನ್ನು ಮುಗಿಸಿಕೊಂಡು ತಮ್ಮ ವ್ಯಾಪಾರ ಮುಗಿಯಲಿ ಬಿಡಲಿ, ಖುಷಿಯಿಂದ ತೀರ್ಥ ಪ್ರಸಾದಗಳನ್ನು ಪಡೆದುಕೊಂಡು ಅಳಿದುಳಿದ ಸಾಮಾನು ಸರಂಜಾಮುಗಳನ್ನು ಅಕ್ಕ-ಪಕ್ಕದವರಿಗೆ ಕೊಟ್ಟು ಹೋಗುತ್ತಿದ್ದ ಸಂಪ್ರದಾಯ ಈಗ ಮರೀಚಿಕೆಯಾಗಿದೆ.

ಇನ್ನೂ ದಂಡಿನ ಮಾರಮ್ಮನ ಜಾತ್ರೆ ಎಂದರೆ ಸಾಕು ಒಂದೂವರೆ ತಿಂಗಳು ಸುತ್ತ ಮುತ್ತಲ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಈಗೆಲ್ಲಾ ರಜಾ ದಿನಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೆಚ್ಚು ಜನರು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಹೆಚ್ಚಾಗಿ ಮಾಂಸಹಾರಿಗಳೆ ದಂಡಿನ ಮಾರಮ್ಮನ ದೇವಿಗೆ ನಡೆದುಕೊಳ್ಳುವವರಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರತಿ ಮಂಗಳವಾರ, ಶುಕ್ರವಾರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹರಕೆ ತೀರಿಸಲು ಕೋಳಿ, ಕುರಿ, ಮೇಕೆಗಳನ್ನು ಬಲಿ ಕೊಟ್ಟು, ಸ್ಥಳದಲ್ಲಿಯೇ ಮಾಂಸಾಹಾರದ ಅಡುಗೆ ಸಿದ್ದಪಡಿಸಿ ಪ್ರಸಾದ ಸ್ವೀಕರಿಸುವ ಸಂಪ್ರಾದಾಯ ಮೊದಲಿನಿಂದಲೂ ಕಾಣಬಹುದಾಗಿದೆ.

ದಂಡಿನ ಮಾರಮ್ಮನ ದೇವಿಯ ಜಾತ್ರ್ರಾ ಮಹೋತ್ಸವವು ದೇವಾಲಯದ ಮುಂಭಾಗದಲ್ಲಿರುವ ದ್ವಾರದ ಮೇಲ್ಭಾಗದಲ್ಲಿ ಮಂಗಳವಾರದ ದಿನದ ನಸುಕಿನ ಸಮಯದಲ್ಲಿ ಹಳ್ಳಿಕಾರರ ಹಾಗೂ ಗೌಡರ ಬಾನದಿಂದ ಸಂಪ್ರಾದಾಯ ಬದ್ಧ ಪೂಜಾ ವಿಧಿ ವಿಧಾನಗಳೊಂದಿಗೆ ಪಂಚ ಕಳಸವನ್ನು ಪ್ರತಿಷ್ಠಾಪಿಸುವುದರ ಮೂಲಕ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗುತ್ತದೆ.

ನಂತರ ಹತ್ತು ದಿನಗಳಲ್ಲಿ ಊರಿನ ಪ್ರಮುಖರು ಅಕ್ಕ-ಪಕ್ಕದ ಗ್ರಾಮಸ್ಥರು ಸೇರಿಕೊಂಡು ಬುಧವಾರದಂದು ದೇವಿಗೆ ಆರತಿ, ಗುರುವಾರದಂದು ಸಾರ್ವಜನಿಕವಾಗಿ ಗುಗ್ಗರಿ ಗಾಡಿಗಳ ಸೇವೆ, ಶುಕ್ರವಾರ ದೇವಾಲಯದ ವತಿಯಿಂದ ರಥೋತ್ಸವ, ಶನಿವಾರ ಹಳ್ಳಿಕಾರರಿಂದ ಉಯ್ಯಾಲೋತ್ಸವ, ಭಾನುವಾರದಂದು ಕುಂಚಿಟಿಗ ಒಕ್ಕಲಿಗರಿಂದ ಸಿಂಹವಾಹನ, ಸೋಮವಾರದಂದು ಕುರುಬ ಸಮುದಾಯವರಿಂದ ಚಂದ್ರ ಮಂಡಲ ವಾಹನ, ಮಂಗಳವಾರದಂದು ಭಜಂತ್ರಿ ಸಮುದಾಯದವರಿಂದ ನವಿಲು ವಾಹನ,

ಬುಧವಾರದಂದು ಹಳ್ಳಿಕಾರ ಸಮುದಾಯದವರಿಂದ ಭಂಡಾರೋತ್ಸವ ಮತ್ತು ದೇವಾಲಯದ ವತಿಯಿಂದ ಬೆಳ್ಳಿಪಾಲಕಿ ಉತ್ಸವ, ಗುರುವಾರದಂದು ದೇವಸ್ಥಾನದ ವತಿಯಿಂದ ಅಗ್ನಿಕುಂಡ, ಶುಕ್ರವಾರದಂದು ಚಿನಕವಜ್ರ, ಕೆರೆಗಳಪಾಳ್ಯ, ಕವಾಡಿಗರ ಪಾಳ್ಯ ಗ್ರಾಮಸ್ಥರಿಂದ ದೇವಿಗೆ ಮಡಿಲಕ್ಕಿ ಸೇವೆ, ಅದೇ ದಿನ ಹಳ್ಳಿಕಾರರು ಮೆರವಣಿಗೆಯ ಮೂಲಕ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಗುಡಿ ತುಂಬಿಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.

 

ದಂಡಿನ ಮಾರಮ್ಮನ ಜಾತ್ರೆಗೆ ಅಗತ್ಯವಿರುವ ಸೌಕರ್ಯಗಳನ್ನು ತಾಲ್ಲೂಕು ಆಡಳಿತದಿಂದ ಕಲ್ಪಿಸಿಕೊಡಲಾಗುತ್ತಿದೆ ಹಾಗೂ ದನಗಳ ಜಾತ್ರೆ ಉತ್ತಮವಾಗಿ ನಡೆಯುತ್ತಿದೆ. ಹಳ್ಳಿಕಾರ್ ದನಗಳ ಮಾರಾಟದಲ್ಲಿ ಬೆಲೆ ಏರಿಕೆಯು ಕಂಡು ಬಂದಿದೆ.

-ಸೋಮಪ್ಪ ಕಡಕೋಳ, ಉಪವಿಭಾಗಾಧಿಕಾರಿ, ಮಧುಗಿರಿ.

ಹಿಂದಿನ ಸಂಪ್ರ್ರದಾಯದ ರೀತಿ ಪಟಾಕಿ ಶಬ್ದಗಳಿಂದ ಕೂಡಿದ ಬೆಳ್ಳಿ ಪಾಲಕಿ ಉತ್ಸವ ನೋಡಲು ಚೆನ್ನ. ವಾತಾವರಣಕ್ಕೆ ಹಾನಿಯಾಗದ ಸಿಡಿ ಮದ್ದುಗಳು ಲಭ್ಯವಿದ್ದು, ಅಂತಹವುಗಳನ್ನು ಬಳಕೆ ಮಾಡಿದರೆ ಸೂಕ್ತ. ಲೇಸರ್ ಲೈಟ್ ಬಳಕೆ ಮಾಡುವುದು ಬೇಡ. ಇದರಿಂದಾಗಿ ಸಂಪ್ರಾದಾಯವನ್ನು ಮುರಿದಂತಾಗುತ್ತದೆ. ಹಾಗಾಗಬಾರದು.

-ಕಂಬದ ನರಸಿಂಹಯ್ಯ, ಚಿಕ್ಕಣ್ಣನ ಪಾಳ್ಯ.

ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಜಾತ್ರೆ ಸ್ಥಗಿತವಾಗಿತ್ತು. ಜಾತ್ರೆಗೆ ಜನ ಮುಖ್ಯ. ಯಾವ ರೀತಿ ಹೊಂದಿಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ. ಊರಿಗೆ ಮುಂಚೆಯೇ ದನಗಳ ಜಾತ್ರೆ ಪ್ರಾರಂಭವಾಗಿದೆ. ಈ ಬಾರಿಯ ಜಾತ್ರೆಯಲ್ಲಿ ಹೆಚ್ಚು ದನಗಳು ಜಮಾವಣೆಯಾಗಿವೆ.

-ಪ್ರೊ. ಮಲನ ಮೂರ್ತಿ, ಸಾಹಿತಿ.

 

           – ಮಧುಗಿರಿ ರಾಜೇಂದ್ರ ಎಂ.ಎನ್

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link