ಕೊಲ್ಕತ್ತಾ:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ‘ಮುಕ್ತಿ ಮೇಳ’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಗುರುವಾರ ಹೇಳಿದ್ದಾರೆ. ಈ ಮೂಲಕ ಕುಂಭ ಮೇಳ ಮೃತ್ಯುಕುಂಭ ಎಂದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾಲ್ತುಳಿತದಲ್ಲಿ 18 ಜನರ ಸಾವನ್ನು ಉಲ್ಲೇಖಿಸಿ ಮಹಾ ಕುಂಭ ಮೇಳವನ್ನು ಮೃತ್ಯುಕುಂಭ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಈ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ಕುಂಭ ಮೇಳ ಆಚರಣೆಯಲ್ಲಿ ವಿನಮ್ರನಾಗಿ ಪಾಲ್ಗೊಳ್ಳಲು ಅಲ್ಲಿಗೆ ಹೋಗಿದ್ದೆ. ಕುಂಭ ಮೇಳ ಮುಕ್ತಿ ಮೇಳ, ಮೃತ್ಯುಂಜಯ ಮೇಳ ಎಂದು ಬಣ್ಣಿಸಿದರು. ಆನಂದ್ ಬೋಸ್ ಅವರು ಕೂಡಾ ಪ್ರಯಾಗ್ ರಾಜ್ ಗೆ ತೆರಳಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು.
ಯಾವುದೇ ವಿವಾದ ಹುಟ್ಟಿಕೊಳ್ಳಲು ನಾನು ಬಯಸುವುದಿಲ್ಲ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಯಾವುದೇ ಪರಿಸ್ಥಿತಿ ಬಗ್ಗೆ ತನ್ನದೇ ಆದ ಅಭಿಪ್ರಾಯ ವ್ಯಕ್ತಪಡಿಸಲು ಮುಖ್ಯಮಂತ್ರಿ ಅರ್ಹರಿದ್ದಾರೆ. ಇಂತಹ ಪ್ರಜಾಪ್ರಭುತ್ವದ ಸೌಂದರ್ಯನನ್ನು ನಾನು ಸ್ವಾಗತಿಸುತ್ತೇನೆ. ಆದರೆ, ರಾಜ್ಯಪಾಲನಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ರಾಜಕೀಯ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಅವರು ಹೇಳಿದರು.
