ಕೋಲ್ಕತ್ತ:
ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ನಡೆದ ಶಿಕ್ಷಕರ ನೇಮಕಾತಿಯನ್ನು ಕೋಲ್ಕತ್ತ ಹೈಕೋರ್ಟ್ ರದ್ದು ಮಾಡುವ ಮೂಲಕ ಸೋಮವಾರ (ಏಪ್ರಿಲ್ 22) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ಈ ಆದೇಶದಿಂದ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಭಾರಿ ಮುಖಭಂಗವಾಗಿದೆ.
2016ರಲ್ಲಿ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿ ನಡೆದಿತ್ತು. ಈ ವೇಳೆ 24 ಸಾವಿರಕ್ಕೂ ಅಧಿಕ ಮಂದಿ ಆಯ್ಕೆಯಾಗಿದ್ದರು. ಇದೀಗ ಕೋರ್ಟ್ ಆದೇಶದಿಂದ ಇಷ್ಟೂ ಮಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ಅಲ್ಲದೆ, ಕೆಲಸಕ್ಕೆ ಸೇರಿದಾಗಿನಿಂದ ಪಡೆದುಕೊಂಡ ಸಂಬಳಕ್ಕೆ ಶೇ.12 ರಷ್ಟು ಬಡ್ಡಿ ಸೇರಿಸಿ ವಾಪಸ್ ನೀಡುವಂತೆ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಖಾಲಿ ಒಎಂಆರ್ ಹಾಳೆಗಳನ್ನು ಸಲ್ಲಿಸಿದ ಬಳಿಕ ಕಾನೂನುಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನವನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ಎಂದು ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ವಿಭಾಗೀಯ ಪೀಠವನ್ನು ರಚನೆ ಮಾಡಲಾಗಿತ್ತು. ಇದೀಗ ಐತಿಹಾಸಿಕ ತೀರ್ಪು ನೀಡಿರುವ ವಿಭಾಗೀಯ ಪೀಠ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಮೇಲೆ ಹೆಚ್ಚಿನ ತನಿಖೆಯನ್ನು ನಡೆಸಿ ಮೂರು ತಿಂಗಳ ಒಳಗೆ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿದೆ. ಅಲ್ಲದೆ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವನ್ನು (WBSSC) ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಕೇಳಿದೆ.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಈ ತೀರ್ಪು ಮುಖಭಂಗವಾಗಿದ್ದು, ಈ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಹಲವು ತೃಣಮೂಲ ನಾಯಕರು ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ.
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಬಂಗಾಳದ ಬಿಜೆಪಿ ಘಟಕ, ಟಿಎಂಸಿ ಸರ್ಕಾರವನ್ನು ಗುರಿಯಾಗಿಸಿ, ವಾಗ್ದಾಳಿ ಮಾಡಿದೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಕ್ಷದಲ್ಲಿ ಅವರ ನಂ. 2 ಆಗಿರುವ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಕೂಡ ಮುಂದಿನ ದಿನಗಳಲ್ಲಿ ಸೋಲನ್ನು ಎದುರಿಸಲಿದ್ದಾರೆ. 2016 ರಿಂದ ಸುಮಾರು 24,000 ಎಸ್‌ಎಸ್‌ಸಿ ನೇಮಕಾತಿಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ, ಸಿಬಿಐ ಯಾರನ್ನಾದರೂ ಕಸ್ಟಡಿಗೆ ತೆಗೆದುಕೊಳ್ಳಬಹುದು. ಈ ತೀರ್ಪು ಯೋಗ್ಯರ ಮುಖದಲ್ಲಿ ನಗು ಮೂಡಿಸಿದೆ. ಈ ಬಾರಿ ಸೋದರಳಿಯ ಮತ್ತು ಅವರ ಚಿಕ್ಕಮ್ಮ ಸೋಲುತ್ತಾರೆ ಎಂದು ಬಂಗಾಳ ಬಿಜೆಪಿ ಘಟಕ ಎಕ್ಸ್ ಖಾತೆಯ ಮೂಲಕ ಕಿಡಿಕಾರಿದೆ.