ಹಾಸ್ಯ ನಟ ತುಕಾಲಿ ಸಂತೋಷ್ ಅವರ ಪತ್ನಿ ಮಾನಸಾ ಅವರು’ಬಿಗ್ ಬಾಸ್ ಕನ್ನಡ ಸೀಸನ್ 11’ಶೋನಿಂದ ಹೊರಬಿದ್ದಿದ್ದಾರೆ. 5ನೇ ವಾರದ ಎಲಿಮಿನೇಷನ್ನಲ್ಲಿ ಅನುಷಾ ರೈ ಮತ್ತು ಮಾನಸಾ ಅವರ ಹೆಸರು ಕೊನೆಯ ಹಂತಕ್ಕೆ ಬಂತು. ಕಡಿಮೆ ವೋಟ್ ಪಡೆದ ಕಾರಣದಿಂದ ಮಾನಸಾ ಅವರು ಎಲಿಮಿನೇಟ್ ಆದರು. ಈ ವಾರ ಸುದೀಪ್ ಅವರು ಎಲಿಮಿನೇಷನ್ ಘೋಷಿಸಿದಾಗ ಒಂದು ಟ್ವಿಸ್ಟ್ ನೀಡಿದರು. ಮಾನಸಾ ಹೊರಗೆ ಹೋಗುವಾಗ ಯಾರೂ ಪ್ರತಿಕ್ರಿಯಿಸುವಂತಿಲ್ಲ ಎಂದರು. ಹಾಗಾಗಿ ಮಾನಸಾ ಅವರಿಗೆ ಸರಿಯಾದ ರೀತಿಯಲ್ಲಿ ವಿದಾಯ ಹೇಳಲು ಕೂಡ ಸದಸ್ಯರಿಗೆ ಸಾಧ್ಯವಾಗಲಿಲ್ಲ.
ಏನಾದರೂ ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡು ಮಾನಸಾ ಅವರು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಬಂದಿದ್ದರು. ‘ಹೇಗಿರಬೇಕು ಅಂತ ಗೊತ್ತಾಗಲಿಲ್ಲ. ಹೊಸದಾಗಿ ಬಂದಿದ್ದೆ. ಹಾಗಾಗಿ ಎಲ್ಲೋ ಎಡವಿದೆ ಎನಿಸಿತು. ನನ್ನ ಮೇಲೆ ನಿರೀಕ್ಷೆ ಇಟ್ಟು ಕರೆಸಿದ್ದರು. ಆದರೆ ನಾನು ಆ ನಿರೀಕ್ಷೆಯನ್ನು ತಲುಪಲಿಲ್ಲ ಎನಿಸುತ್ತದೆ. ಎಲಿಮಿನೇಟ್ ಆಗಿದ್ದಕ್ಕೆ ತುಂಬ ಬೇಸರ ಇದೆ’ ಎಂದು ಮಾನಸಾ ಅವರು ಹೇಳಿದ್ದಾರೆ.
ಪ್ರತಿ ವಾರ ಕೂಡ ಮಾನಸಾ ಅವರು ನಾಮಿನೇಟ್ ಆಗುತ್ತಿದ್ದರು. ಟಾಸ್ಕ್ನಲ್ಲಿ ಶ್ರಮವಹಿಸಿ ಆಡುತ್ತಿದ್ದ ಅವರು ಎಲ್ಲರನ್ನೂ ನಗಿಸಲು ಕೂಡ ಪ್ರಯತ್ನಿಸುತ್ತಿದ್ದರು. ಆದರೆ ಜಗಳಕ್ಕೆ ನಿಂತರೆ ಎಲ್ಲರಿಗೂ ಕಿರಿಕಿರಿ ಆಗುವ ಮಟ್ಟಕ್ಕೆ ಜಗಳ ಮಾಡುತ್ತಿದ್ದರು. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ಮಾನಸಾ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದರು. ಅದಕ್ಕೆ ಪತ್ರದ ಮೂಲಕ ತುಕಾಲಿ ಸಂತೋಷ್ ಅವರು ತಿರುಗೇಟು ನೀಡಿದ್ದರು.
ಮಾನಸಾ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವುದಕ್ಕೂ ಮುನ್ನ ಒಂದು ವಿಶೇಷ ಅಧಿಕಾರ ಪಡೆದರು. ‘ನೀವು ಒಬ್ಬರನ್ನು ಜೈಲಿಗೆ ಕಳಿಸಬಹುದು’ ಎಂದು ಬಿಗ್ ಬಾಸ್ ಹೇಳಿದರು. ಆಗ ಮಾನಸಾ ಅವರು ಉಗ್ರಂ ಮಂಜು ಹೆಸರನ್ನು ಸೂಚಿಸಿದರು. ಮಾನಸಾ ಅವರು ಎಲಿಮಿನೇಟ್ ಆಗಿದ್ದಕ್ಕೆ ತುಕಾಲಿ ಸಂತೋಷ್ ಪ್ರತಿಕ್ರಿಯೆ ನೀಡಿದರು.
‘ಎಲಿಮಿನೇಟ್ ಆಗಿದ್ದಕ್ಕೆ ಬೇಸರ ಇದೆ. ಖುಷಿ ಕೂಡ ಇದೆ. ಹಳ್ಳಿಯಲ್ಲಿ ಹುಟ್ಟಿ, ಕಡು ಬಡತನದಲ್ಲಿ ಕುಟುಂಬ ಸಾಗಿಸುತ್ತಿದ್ದಳು. ಅವಳ ಬದುಕಿಗೆ ನಾನು ಬಂದೆ. ಅವಳು ಇಷ್ಟು ದೊಡ್ಡ ರಿಯಾಲಿಟಿ ಶೋಗೆ ಬಂದಿದ್ದಾಳೆ ಎಂದರೆ ಅದೇ ಅವಳ ದೊಡ್ಡ ಗೆಲುವು. ಆಕೆಯ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವಳ ಪರವಾಗಿ ಕ್ಷಮೆ ಕೇಳುತ್ತೇನೆ’ ಎಂದು ತುಕಾಲಿ ಸಂತೋಷ್ ಹೇಳಿದರು.