ಸಂಸತ್ ಹೈಡ್ರಾಮಾ: BJP ಸಂಸದನಿಗೆ ಗಾಯ…!

ನವದೆಹಲಿ:

    ‘ಸಂವಿಧಾನ ಶಿಲ್ಪಿ’ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ವಿಚಾರವಾಗಿ ಸಂಸತ್ ಭವನದ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಪ್ರತಿಭಟನೆ ವೇಳೆ ಉಂಟಾದ ತಳ್ಳಾಟದಲ್ಲಿ ಬಿಜೆಪಿ ಸಂಸದರಿಬ್ಬರು ಗಾಯಗೊಂಡಾಗ ಅವರಿಗೆ ಕರ್ನಾಟಕದ ಸಂಸದ ಡಾ.ಮಂಜುನಾಥ್ ಚಿಕಿತ್ಸೆ ನೀಡಿದರು. ಅಂಬೇಡ್ಕರ್‌ ಅವರನ್ನು ಅವಮಾನಿಸಿರುವ ಪ್ರತಿಪಕ್ಷ ಕಾಂಗ್ರೆಸ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತ, ಫಲಕಗಳನ್ನು ಹಿಡಿದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಆವರಣದೊಳಗೆ ಪ್ರತಿಭಟಿಸಿದರು.

   ಮತ್ತೊಂದೆಡೆ ಅಂಬೇಡ್ಕರ್‌ ಕುರಿತು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಆಗ್ರಹಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ‘ಇಂಡಿಯಾ’ ಬಣದ ಸಂಸದರು ನೀಲಿ ಬಣ್ಣದ ಬಟ್ಟೆ ಧರಿಸಿ ಇಂದು (ಗುರುವಾರ) ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

   ‘ಇಂಡಿಯಾ’ ಬಣದ ಸದಸ್ಯರು ಸಂಸತ್ತಿನ ಆವರಣದಲ್ಲಿರುವ ಬಿ.ಆರ್ ಅಂಬೇಡ್ಕರ್‌ ಅವರ ಪ್ರತಿಮೆಯ ಬಳಿ ‘ಜೈ ಭೀಮ್‌’ ಮತ್ತು ‘ಅಮಿತ್‌ ಶಾ ಮಾಫಿ ಮಾಂಗೋ’ ಎಂಬ ಪೋಸ್ಟರ್‌ಗಳು ಹಾಗೂ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಹಿಡಿದು ಪ್ರತಿಭಟನೆ ನಡೆಸಿದರು.

  ಪ್ರತಿಭಟನೆ ನಡೆಸುತ್ತಿದ್ದ ‘ಇಂಡಿಯಾ’ ಬಣ ಸಂಸದರು ಹಾಗೂ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಮಕರ ದ್ವಾರ ಬಳಿ ಮುಖಾಮುಖಿಯಾಗಿದ್ದು, ಈ ವೇಳೆ ಸಂಸತ್ ಭವನದ ಆವರಣದಲ್ಲಿ ತಳ್ಳಾಟ ಮತ್ತು ನೂಕುನುಗ್ಗಲು ಆರಂಭವಾಯಿತು. ಈ ನೂಕಾಟ-ತಳ್ಳಾಟದ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಗಾಯಗೊಂಡಿದ್ದು, ಸಾರಂಗಿ ಅವರ ಹಣೆಯ ಮೇಲೆ ಗಾಯವಾಗಿದೆ. ವೈದ್ಯರು ಅವರ ಗಾಯಕ್ಕೆ ಹೊಲಿಗೆ ಹಾಕಿದ್ದು, ಅವರು ಮೇಲ್ವಿಚಾರಣೆಗಾಗಿ ಐಸಿಯುನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ಘಟನೆಯಲ್ಲಿ ಮತ್ತೋರ್ವ ಬಿಜೆಪಿ ಸಂಸದ ಮುಕೇಶ್ ರಜಪೂತ್ ಕೂಡ ಗಾಯಗೊಂಡಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

   ಇನ್ನು ತಳ್ಳಾಟದ ವೇಳೆ ಗಾಯಗೊಂಡ ಸಂಸದ ಸಾರಂಗಿಗೆ ಕರ್ನಾಟಕದ ಸಂಸದ ವೈದ್ಯ ಡಾ. ಸಿಎನ್‌ ಮಂಜುನಾಥ್‌ ಪ್ರಥಮ ಚಿಕಿತ್ಸೆ ನೀಡಿದರು. ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದ್ದರಿಂದ ಕರ್ನಾಟಕದ ಸಂಸದ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್‌ ಮಂಜುನಾಥ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. 

   ಇನ್ನು ಈ ತಳ್ಳಾಟಕ್ಕೆ ರಾಹುಲ್ ಗಾಂಧಿ ಅವರೇ ಕಾರಣ ಎಂದು ಬಿಜೆಪಿ ಸಂಸದರು ಆರೋಪಿಸಿದ್ದು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಭಟನಾ ನಿರತ ಸಂಸದರನ್ನು ತಳ್ಳಿದ್ದು ಇದರಿಂದಲೇ ಸಂಸದ ಮುಖೇಶ್ ರಜಪೂತ್ ಮತ್ತು ಸಾರಂಗಿ ಬಿದ್ದುಬಿಟ್ಟರು. ನಂತರ ಅವರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

   ಈ ಸಂಬಂಧ ಬಿಜೆಪಿ ಸಂಸದರು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು, ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಭೂಪೇಂದರ್ ಯಾದವ್ ಹಂಚಿಕೊಂಡ ವೀಡಿಯೊದಲ್ಲಿ, ತಳ್ಳಾಟದ ಬಳಿಕ ಗಾಯಗೊಂಡ ಬಿಜೆಪಿ ಸಂಸದರ ಬಳಿ ಬಂದು ರಾಹುಲ್ ಗಾಂಧಿ ಮತ್ತೆ ವಾಪಸ್ ಆಗುತ್ತಾರೆ. ಈ ವೇಳೆ ಬಿಜೆಪಿ ಸಂಸದರು ನಿಮಗೆ ನಾಚಿಕೆಯಾಗುವುದಿಲ್ಲವೇ..? ನೀವು ಗೂಂಡಾನಂತೆ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರುವುದು ದಾಖಲಾಗಿದೆ.

   ಇನ್ನು ಬಿಜೆಪಿ ನಾಯಕರ ಆರೋಪಗಳನ್ನು ನಿರಾಕರಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸಂಸದರೇ ರಾಹುಲ್ ಗಾಂಧಿ ಅವರು ಸಂಸತ್ ಪ್ರವೇಶಿಸದಂತೆ ತಡೆದರು ಎಂದು ಆರೋಪಿಸಿದ್ದಾರೆ.

Recent Articles

spot_img

Related Stories

Share via
Copy link