ಲಖನೌ:
ಉತ್ತರಪ್ರದೇಶದ ಬಾಂದಾದಲ್ಲಿ ಮಹಿಳೆಯೊಬ್ಬಳು ನೆರೆಮನೆಯ ವ್ಯಕ್ತಿಯ ಖಾಸಗಿ ಭಾಗಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಸಂತ್ರಸ್ತ ತನಗಾದ ಅಗ್ನಿಪರೀಕ್ಷೆಯನ್ನು ವಿವರಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆ ಚೂಪಾದ ವಸ್ತುವನ್ನು ಬಳಸಿ ಆ ವ್ಯಕ್ತಿಯ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ. ಅಲ್ಲದೇ ಆ ವ್ಯಕ್ತಿ ಬಲವಂತವಾಗಿ ತನ್ನ ಮನೆಗೆ ಪ್ರವೇಶಿಸಿ ತನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದರಿಂದ ತಾನು ತೀವ್ರ ಕ್ರಮ ಕೈಗೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಆ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ನಗರ್ ಕೊಟ್ವಾಲಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, 40 ವರ್ಷದ ವ್ಯಕ್ತಿ ತನ್ನ ನೆರೆಮನೆಗೆ ಪ್ರವೇಶಿಸಿ ಮಹಿಳೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನಂತೆ. ಮಹಿಳೆ ಅದನ್ನು ವಿರೋಧಿಸಿದಾಗ ಆತ ಆಕೆಯ ಮೇಲೆ ಬಲ ಪ್ರಯೋಗ ಮಾಡಿದ್ದಾನೆ. ಇದರಿಂದಾಗಿ ಆ ಮಹಿಳೆ ಆತನಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಹರಿತವಾದ ಆಯುಧವನ್ನು ಹಿಡಿದು ಆತನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳಂತೆ.
ಆದರೆ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಅಲ್ಲಗೆಳೆದು ಘಟನೆಯ ರಾತ್ರಿ ತನಗೆ ಆರೋಗ್ಯ ಸರಿಯಿಲ್ಲ ಮತ್ತು ವೈದ್ಯರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಮಹಿಳೆ ಅವನನ್ನು ತನ್ನ ಮನೆಗೆ ಕರೆದು ಕೋಣೆಯೊಳಗೆ ಕರೆದೊಯ್ದ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಪಡಿಸಿದ್ದಾಳೆ. ಅದಕ್ಕೆ ಆ ವ್ಯಕ್ತಿ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಹರಿತವಾದ ಆಯುಧವನ್ನು ತೆಗೆದುಕೊಂಡು ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತ ವ್ಯಕ್ತಿ ವಿವರಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆ ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು, ನೋವನ್ನು ತಾಳಲಾರದೆ ನಂತರ ಅವನು ಮನೆಯ ಹೊರಗೆ ಓಡಿದ್ದಾನೆ. ತೀವ್ರ ರಕ್ತಸ್ರಾವವಾಗುತ್ತಿರುವಾಗ ವ್ಯಕ್ತಿ ಓಡುತ್ತಿರುವುದನ್ನು ಅವರ ಕುಟುಂಬ ಸದಸ್ಯರು ಗಮನಿಸಿದ್ದಾರೆ. ಅವರು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತನಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವ್ಯಕ್ತಿಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.