ಬೆಂಗಳೂರು:
ಪಟೌಡಿ ಮನೆತನದ ರಾಜ, ಹಾಲಿವುಡ್‌ನ ಚೋಟೆ ನವಾಬ ಸೈಫ್ ಆಲಿ ಖಾನ್ ತನ್ನ ‘ಅರಮನೆ’ಯಲ್ಲಿರುವಾಗಲೇ ಮಾರಣಾಂತಿಕ ಹಲ್ಲೆ ನಡೆದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದರಲ್ಲಿಯೂ ಚಾಕುವಿನಿಂದ ಚುಚ್ಚಿದ ರಭಸಕ್ಕೆ ತುಂಡಾಗಿದ್ದ ಚಾಕು, ಸಮಯಕ್ಕೆ ಸರಿಯಾಗಿ ಕಾರು ಸಿಗದೇ ಆಟೋದಲ್ಲಿಯೇ ಆಸ್ಪತ್ರೆಗೆ ದಾಖಲಾದ ರೀತಿ ಎಲ್ಲವೂ ಆತಂಕವನ್ನು ಸೃಷ್ಟಿಸಿದ್ದು ಸುಳ್ಳಲ್ಲ. ಇನ್ನು ಈ ಸುದ್ದಿ ಹೊರಬೀಳುತ್ತಿದ್ದಂತೆ, ದಾಳಿಗೆ ಹತ್ತಾರು ಕಾರಣಗಳು ಕಾಣಿಸತೊಡಗಿದವು. ಆರಂಭದಲ್ಲಿ ಈ ಎಲ್ಲ ಕಾರಣ ಸರಿ ಎನಿಸಿದರೂ, ಪ್ರಕರಣದ ತನಿಖೆ ಸಾಗಿದಂತೆ ಈ ಎಲ್ಲವನ್ನೂ ಮೀರಿ ಇನ್ಯಾವುದೋ ವೈಷಮ್ಯ ದಾಳಿಗೆ ಪ್ರೇರಣೆ ನೀಡಿದೆ ಎನ್ನುವುದು ಪೊಲೀಸರಿಗೆ ಹಾಗೂ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ ಬಹುತೇಕರ ಅರಿವಿಗೆ ಬಂದಿದೆ.
ಪ್ರಕರಣ ನಡೆದ ಕ್ಷಣದಿಂದ ಸೈಫ್ ಆಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ತನಕದ ಪ್ರತಿ ಹಂತವೂ ಒಂದಿಲ್ಲೊಂದು ಅನುಮಾನ ಜನರಲ್ಲಿ ಮೂಡುತ್ತಾ ಹೋಗಿದೆ. ಆರಂಭದಲ್ಲಿ ಸೈಫ್ ಮನೆಗೆ ಆಗುಂತಕ ದರೋಡೆಗೆ ಬಂದಿದ್ದ ಎನ್ನುವ ವಾದವನ್ನು ಮಂಡಿಸಲಾಯಿತು. ಅದಾದ ಬಳಿಕ ‘ಕೃಷ್ಣಮೃಗ’ ಹತ್ಯೆಗೆ ಈ ಪ್ರಕರಣವನ್ನು ಲಿಂಕ್ ಮಾಡಲಾಯಿತು. ಈ ಎರಡರ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಕಾರಣಕ್ಕೆ ಅಥವಾ ಬಾಂಗ್ಲಾದೇಶದ ಲಿಂಕ್ ಕೊಡುವ ಪ್ರಯತ್ನಗಳು ನಡೆದವು. ಆದರೆ ಏಳು ಸುತ್ತಿನ ಕೋಟೆಯಂತಿರುವ ಸೈಫ್ ನಿವಾಸಕ್ಕೆ ಆಗುಂತಕ ಎಂಟ್ರಿ ಕೊಟ್ಟಿದ್ದಾದರೂ ಹೇಗೆ ಎನ್ನುವ ಪ್ರಶ್ನೆಗೆ ಈವರೆಗೆ ಯಾರೂ ಉತ್ತರಿಸುತ್ತಿಲ್ಲ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂಬೈ ಪೊಲೀಸರು 20ಕ್ಕೂ ಹೆಚ್ಚು ತಂಡಗಳನ್ನು ರಚಿಸಿ, ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ಶಂಕಿತ ಯಾರಿಗೂ ಕಾಣಿಸದಂತೆ, ಸಿಸಿ ಕ್ಯಾಮೆರಾದ ಕಣ್ಗಾವಲನ್ನೂ ಮೀರಿ ಸೈಫ್ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ? ಒಂದು ವೇಳೆ ಹತ್ಯೆಯ ಆಲೋಚನೆಯಲ್ಲಿಯೇ ಮನೆ ಪ್ರವೇಶಿಸಿದ್ದರೆ ‘ತರಕಾರಿ’ ಹೆಚ್ಚುವ ಚಾಕುವನ್ನು ಬಳಸಿ ಏಕೆ ಹಲ್ಲೆ ಮಾಡುತ್ತಿದ್ದ ಎನ್ನುವ ಪ್ರಶ್ನೆ ಮೂಡಿದೆ.
ಸಣ್ಣ ಪುಟ್ಟ ಚಿತ್ರದಲ್ಲಿ ನಟಿಸಿದ ನಟರೇ ತಮ್ಮ ಸುತ್ತ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಕಾವಲಿಗೆ ಇರಿಸಿಕೊಂಡಿರುತ್ತಾರೆ. ಹೀಗಿರುವಾಗ ತಾರಾ ದಂಪತಿಗಳಾದ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ವಾಸವಿದ್ದ ಐಷಾರಾಮಿ ಮನೆಗೆ ಭದ್ರತಾ ಸಿಬ್ಬಂದಿ ಇರಲಿಲ್ಲವೇ? ಜನಸಾಮಾನ್ಯರೇ ಇತ್ತೀಚಿನ ದಿನಗಳಲ್ಲಿ ಮನೆ ಸುತ್ತ ಸಿಸಿ ಕ್ಯಾಮೆರಾ ಹಾಕಿಸಿಕೊಳ್ಳುತ್ತಿರುವ ಸಮಯದಲ್ಲಿ ಅಪಾರ್ಟ್‌ಮೆಂಟ್‌ನ ಎರಡು ಫ್ಲೋರ್ ಖರೀದಿಸಿದ್ದರೂ ಮನೆಯ ಸುತ್ತ ಕ್ಯಾಮೆರಾ ಹಾಕಿಸಿರಲಿಲ್ಲವೇ? ಹಾಕಿದ್ದರೂ ಅದರಲ್ಲಿ ಆಗುಂತಕನ ಚಲನವಲನ ಕಾಣಿಸಿಲ್ಲವೇ? ಎನ್ನುವ ಪ್ರಶ್ನೆೆಗಳಲ್ಲಿ ಪೊಲೀಸರಿಗೆ ಉತ್ತರ ಸಿಕ್ಕಿಲ್ಲ.
ಘಟನೆ ನಡೆದಿದ್ದು ತಡರಾತ್ರಿ ಎರಡು ಗಂಟೆ ಸಮಯದಲ್ಲಿ. ದಾಳಿಯಾಗುತ್ತಿದ್ದಂತೆ ಸೈಫ್, ತನ್ನ ಪತ್ನಿಗೆ ಕರೆ ಮಾಡುವ ಬದಲು ಮಗನಿಗೆ ಕರೆ ಮಾಡಿದ್ದೇಕೆ? ಅಂದರೆ ಕರೀನಾ ಮನೆಯಲ್ಲಿರಲಿಲ್ಲ. ಬದಲಿಗೆ ಪೆಂಟ್‌ಹೌಸ್‌ನಲ್ಲಿ ‘ಪಾರ್ಟಿ’ ಮೂಡ್‌ನಲ್ಲಿದ್ದರು. ಕೋಟ್ಯಂತರ ರುಪಾಯಿ ಆಸ್ತಿ ಒಡೆಯನಾಗಿದ್ದರೂ ಸೈಫ್ ಮಗ ಇಬ್ರಾಹಿಂ ಆಲಿ ಖಾನ್ ಅಪ್ಪನನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದು ಏಕೆ? ಆ ಕ್ಷಣದಲ್ಲಿ ಮನೆಯಲ್ಲಿ ಒಂದೂ ಕಾರು ಇರಲಿಲ್ಲವೇ? ಅಥವಾ ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕೆಂಬ ಸಾಮಾನ್ಯ ಜ್ಞಾನವನ್ನೂ ಮಗ ಉಪಯೋಗಿಸಲಿಲ್ಲವೇ? ಈ ಎಲ್ಲವನ್ನೂ ಮೀರಿ ಸೈಫ್ ಮೇಲೆ ದಾಳಿ ನಡೆದಾಗ ಚಾಕು ಮುರಿದಿದೆ.
ಆದರೆ ಈ ಪ್ರಮಾಣದಲ್ಲಿ ಗಾಯವಾದರೂ, ಸೈಫ್ ಧರಿಸಿದ್ದರು ಎನ್ನಲಾದ ಯಾವ ಬಟ್ಟೆಯೂ ಹರಿದಿರುವ ಅಥವಾ ಚಾಕುವಿನ ಇರಿತಕ್ಕೆ ತೂತಾಗಿರುವುದು ಕಾಣಿಸಿಲ್ಲ. ಅಂದರೆ ಈ ದಾಳಿಯ ಸಮಯದಲ್ಲಿ ಸೈಫ್ ಶರ್ಟ್‌ನ್ನೇ ಧರಿಸಿರಲಿಲ್ಲವೇ ಎನ್ನುವ ಪೊಲೀಸರ ಪ್ರಶ್ನೆಗೆ ‘ಕೆಲಸದಾಕೆ ನಿರುತ್ತರ’ವಾಗಿರುವುದು ಹೊಸ ಆಯಾಮದಲ್ಲಿ ತನಿಖೆಯ ಅಗತ್ಯವಿದೆ ಎನ್ನುವುದನ್ನು ಸೂಚ್ಯವಾಗಿ ಎತ್ತಿಹಿಡಿಯುತ್ತಿದೆ.
ಸಾಹಸ್ರಾರು ಕೋಟಿ ಒಡೆಯನ ಮನೆಗೆ ದಾಳಿ ನಡೆಸುವಾಗ ಆಗುಂತಕನ ‘ಚಿಲ್ಲರೆ’ ಬೇಡಿಕೆ, ತರಕಾರಿ ಹೆಚ್ಚುವ ಚಾಕುವಿನಿಂದ ಹಲ್ಲೆ, ರಕ್ತಸಿಕ್ತ ಸೈಫ್ ಅನ್ನು ಕರೆದುಕೊಂಡು ಆಟೋದಲ್ಲಿ ಕಾಣಿಸದ ರಕ್ತದ ಕಲೆ ಸೇರಿದಂತೆ ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ದರೋಡೆ ಮೀರಿ ‘ಇನ್ಯಾವುದೋ’ ಕಾರಣಕ್ಕೂ ಈ ದಾಳಿ ನಡೆದಿದೆ ಎನ್ನುವುದು ಸುಳ್ಳಲ್ಲ. ಏಕೆಂದರೆ ಈ ಜಗತ್ತಿನಲ್ಲಿ ನಡೆದಿರುವ ಯುದ್ಧ, ದಾಳಿಗಳಿಗೆಲ್ಲ ಕಾರಣ ‘ಹೆಣ್ಣು-ಮಣ್ಣು-ಹೊನ್ನಲ್ಲದೇ’ ಮತ್ತಾವ್ಯ ಕಾರಣಗಳೂ ಇಲ್ಲ!
ಇಡೀ ಪ್ರಕ್ರಿಯೆಯಲ್ಲಿ ಅನುಮಾನಕ್ಕೆ ಕಾರಣವಾಗಿರುವುದು ದರೋಡೆ ಮಾಡಲು ಬಂದ ವ್ಯಕ್ತಿಯ ಬೇಡಿಕೆ. ಜೀವ ಪಣಕ್ಕಿಟ್ಟು ಭಾರಿ ಭದ್ರತೆಯಿರುವ ಎನ್ನಲಾದ ಸ್ಟಾರ್ ನಟನೊಬ್ಬನ ಮನೆಗೆ ನುಗ್ಗಿರುವ ಆಗುಂತಕ ಕೇವಲ ಒಂದು ಕೋಟಿ ರು.ಗೆ ಬೇಡಿಕೆ ಇರಿಸಿದ್ದಾರೆ. ಐದು ಸಾವಿರ ಕೋಟಿ ರು. ಆಸ್ತಿ ಒಡೆಯನ ಮನೆಗೆ ಬರುವ ಆಗುಂತಕ ಇಷ್ಟು ಸಣ್ಣ ಪ್ರಮಾಣದ ಬೇಡಿಕೆಯನ್ನಿಟ್ಟುಕೊಂಡು ಬರುವನೇ? ಒಂದು ವೇಳೆ ದಾಳಿ ಮಾಡಿದರೂ ಕೋಟಿ ರುಪಾಯಿಗಾಗಿ ಸೈಫ್ ಆಲಿ ಖಾನ್ ತಮ್ಮ ಜೀವವನ್ನೇ ಪಣಕ್ಕೆ ಇಡುವರೇ ಎನ್ನುವ ಪ್ರಶ್ನೆಗಳಿವೆ.
ಅನುಮಾನಗಳಿಗೆ ಕಾರಣವೇನು?
- ಸೈಫ್ ರಕ್ತಸಿಕ್ತವಾಗಿದ್ದರೂ ಲಿಫ್ಟ್‌ನಲ್ಲಿ ಒಂದು ಹನಿ ರಕ್ತ ಕಾಣಿಸದಿರುವ ಹಿಂದಿನ ರಹಸ್ಯವೇನು?
- ಕೊಲೆ, ದರೋಡೆಯ ಮನಸ್ಥಿತಿಯಲ್ಲಿದ್ದ ಆಗುಂತಕ ಅಡುಗೆ ಮನೆಯ ಚಾಕುವನ್ನು ತಂದಿದ್ದೇಕೆ?
- 23 ವರ್ಷದ ಮಗ ಆಂಬ್ಯುನ್ಸ್‌ಗೆಗೆ ಕರೆ ಮಾಡುವ ಬದಲು ಆಟೋದಲ್ಲಿ ಕರೆದುಕೊಂಡು ಹೋಗಿದ್ದೇಕೆ?
- ಮನೆ ಕೆಲಸದಾಕೆ ಹಾಗೂ ಸೈಫ್ ಪುತ್ರ ಹೇಳುವಂತೆ ಭಾರಿ ಪ್ರಮಾಣದಲ್ಲಿ ರಕ್ತ ಹರಿಯುತ್ತಿದ್ದರೂ, ಆಟೋದಲ್ಲಿ ಮಾತ್ರ ರಕ್ತದ ಕಲೆಯ ಗುರುತಿಲ್ಲ
- ಇಷ್ಟೆಲ್ಲ ಪ್ರಕ್ರಿಯೆಗಳು ನಡೆದಿದ್ದರೂ, ಮನೆಯ ಸುತ್ತಲಿನ ಒಂದೇ ಒಂದು ಸಿಸಿ ಕ್ಯಾಮೆರಾದಲ್ಲಿ ಯಾವೊಂದು ಸಾಕ್ಷ್ಯವೂ ದಾಖಲಾಗಿಲ್ಲ
