ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದ ಮುಡಾ ನಿವೇಶನದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಅಪ್ಡೇಟ್ ಹೊರಬಿದ್ದಿದೆ. ಮುಡಾ ಸೈಟು ಹಂಚಿಕೆ ಕೇಸ್ನಲ್ಲಿ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ.ಇದು ಸಿದ್ದರಾಮಯ್ಯ ಅವರ ಕುರ್ಚಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಪರಮೇಶ್ವರ್, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡ್ತೇವೆ ಎಂದಿದ್ದಾರೆ.
‘ಈಗ ತಾನೇ ನನಗೂ ಸುದ್ದಿ ಬಂದಿದೆ. ಯಾವ ಅನುಮತಿ ಕೊಟ್ಟಿದ್ದಾರೋ ನೋಡಬೇಕು. ಸಿಎಂ ಅವರು ಲೀಗಲ್ ಟೀಮ್ ಜತೆ ಚರ್ಚೆ ಮಾಡಿ ಮುಂದೆ ಹೆಜ್ಜೆಯಿಡಲಿದ್ದಾರೆ. ಕ್ಯಾಬಿನೆಟ್ ಅಡ್ವೈಸ್ ಮಾಡಿದ್ಮೇಲೂ ಕೊಟ್ಟಿದ್ದಾರೆ. ಕೊಡಲ್ಲ ಅಂದುಕೊಂಡಿದ್ವಿ, ಆದ್ರೂ ಕಳಿಸಿದ್ದಾರೆ. ಅವರಿಗೆ ಮೊದಲಿನಿಂದಲೂ ಮೇಲಿನಿಂದ ಒತ್ತಡ ಇದೆ. ಆ ರೀತಿ ಇದೆ ಅನ್ನೋದು ಸ್ಪಷ್ಟ. ನಿಖರವಾದ ಮಾಹಿತಿಗಳಿಲ್ಲ. ಮುಖ್ಯಮಂತ್ರಿಗಳ ಆದೇಶ ಅಥವಾ ಮೌಖಿಕ ಆದೇಶ ಕೊಟ್ಟಿರೋದಾಗಲೀ ಇಲ್ಲ. ನಾವು ಎಳೆ ಎಳೆಯಾಗಿ ಶೋಕಾಸ್ ನೋಟೀಸ್ಗೆ ಉತ್ತರ ಕೊಟ್ಟಿದ್ದೆವು. ಆದ್ರೂ ಕೊಟ್ಟಿದ್ದಾರೆ’ ಎಂದರು.
‘ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡಿದ್ದಾರೆ. ರಾಜಭವನದಲ್ಲಿ ಏನು ಬೆಳವಣಿಗೆ ಆಗುತ್ತೋ ನಮಗೆ ಗೊತ್ತಿಲ್ಲ. ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರುವವರ ಜೊತೆ ಚರ್ಚೆ ಮಾಡಬಹುದು. ಇದು ದ್ವೇಷದ ರಾಜಕಾರಣ ಅನಿಸುತ್ತದೆ. ನೇರವಾಗಿ ಸಿಎಂ ಯಾವುದರಲ್ಲೂ ಭಾಗಿಯಾಗಿಲ್ಲ. ಇದು ಬಿಜೆಪಿಯವರ ಪಿತೂರಿ. ಅವರು ರಾಜೀನಾಮೆ ಕೇಳೋದು ಸ್ವಾಭಾವಿಕ, ಇದನ್ನೆಲ್ಲಾ ಎದುರಿಸುತ್ತೀವಿ’ ಎಂದು ಹೇಳಿದರು.
