ರಾಜ್ಯದಲ್ಲಿ 25 ಜನ‌ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ: ಸಿಎಂ ಪ್ರಶ್ನೆ

ಕೊಪ್ಪಳ:

    ಯಾವ ಉಹಾಪೋಹಗಳಿಗೂ ಕಿವಿಗೊಡಬೇಡಿ. ಪೂರ್ಣ ಐದು ವರ್ಷ ನಮ್ಮ ಪಕ್ಷವೇ ಅಧಿಕಾರ ನಡೆಸಲಿದೆ, ಮುಂದಿನ 5 ವರ್ಷವೂ ನಾನೇ ಮುಖ್ಯಮಂತ್ರಿಯಾಗಿರಲಿದ್ದೇನೆ, ಮಂದಿನ‌ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ‌ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಏನೇ ತೀರ್ಮಾನವಾದರು ಅದು ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗೋದು. ಡಿಸಿಎಂ ವಿಚಾರ ತೀರ್ಮಾನ ಮಾಡೋದು ಕೂಡ ಹೈಕಮಾಂಡ್‌ ಎಂದರು.

    ರಮೇಶ್ ಜಾರಕಿಹೊಳಿ ಸರ್ಕಾರ ಬೀಳುತ್ತೆ ಎನ್ನುವ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ, ಅವರು ಸೋತಿದ್ದಾರೆ, ಬೇರೆ ಕೆಲಸ ಇಲ್ಲದೆ ಬಾಯಿಗೆ ಬಂದಂಗೆ ಮಾತನಾಡುತ್ತಾರೆ ಎಂದರು. ರಾಜ್ಯದ ಜನ ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಬಿಜೆಪಿಯವರು ಭ್ರಮ ನಿರಸರಾಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದೆ ಇರಲು ಆಗಲ್ಲ. ಮತ್ತೆ ಅಪರೇಷನ್ ಮಾಡೋಕೆ ಪ್ರಯತ್ನ ಮಾಡುತ್ತಾರೆ. ಅದು ಸಾಧ್ಯವಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    ಸಿಎಂ ಬದಲಾವಣೆ ವಿಚಾರಕ್ಕೆ ಗರಂ ಆದ ಸಿದ್ದರಾಮಯ್ಯ, ಸ್ವಪಕ್ಷೀಯ ಶಾಸಕರ ವಿರುದ್ಧ ಹರಿಹಾಯ್ದರು. ‘ಕೆಲಸ ಇಲ್ಲದೇ ಇರೋರು ಸಿಎಂ ಬದಲಾವಣೆ ವಿಚಾರ ಮಾತನಾಡುತ್ತಾರೆ. ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲಾ. ಹೀಗಾಗಿ ಮಾತನಾಡುತ್ತಾರೆ’ ಎಂದರು.

    ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ನಮ್ಮ ಸಂಪುಟದ ನಾಲ್ವರು ಸಚಿವರು ದೆಹಲಿಗೆ ಹೋದರೂ ಪ್ರಧಾನಿ ಮತ್ತು ಸಂಬಂಧಿಸಿದ ಸಚಿವರು ಭೇಟಿಗೆ ಸಮಯ‌ವೇ ನೀಡುತ್ತಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರದಿಂದ ಬರ ಪರಿಹಾರ ಕೊಡಿಸುವುದನ್ನು ಬಿಟ್ಟು ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಬಿಜೆಪಿ ನಾಯಕರು ಬರ ಅಧ್ಯಯನ ಮಾಡುವುದನ್ನು ಬಿಟ್ಟು ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ 25 ಜನ‌ ಬಿಜೆಪಿ ಸಂಸದರಿದ್ದಾರೆ. ಅವರೆಲ್ಲ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

   ಆರು ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಗಲು ಗನಸು ಕಾಣುತ್ತಿದ್ದಾರೆ. ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲಎಂದರು. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ‌ ಅವರು ರಾಜ್ಯಕ್ಕೆ ಬಂದಿದ್ದು, ಅಸಮಾಧಾನ ಶಮನಕ್ಕಲ್ಲ. ಲೋಕಸಭಾ ಚುನಾವಣೆಯ ತಯಾರಿ ಕುರಿತು ಚರ್ಚಿಸಲು ಬಂದಿದ್ದರು. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap