ಛತ್ತೀಸ್ ಗಢ
ದುರ್ಗ್ ಜಿಲ್ಲೆಯಲ್ಲಿ ಕಳ್ಳತನ ಮಾಡಲು ಮನೆಗೆ ನುಗ್ಗಿದ ಯುವಕನೊಬ್ಬ ದಂಪತಿಯ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ದಂಪತಿಯಿಂದ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.ಆರೋಪಿ ವಿನಯಕುಮಾರ್ ಸಾಹುನನ್ನು ಛತ್ತೀಸ್ ಗಢದ ನಂದಿನಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಹಿವಾರ ಗ್ರಾಮದ ನಿವಾಸಿಗಳಾಗಿರುವ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಜೂನ್ 25ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್, ಉಪವಿಭಾಗಾಧಿಕಾರಿ ಸಂಜಯ್ ಪುಂಡೀರ್ ತಿಳಿಸಿದ್ದಾರೆ.
ಜೂನ್ 17ರಂದು ಪತಿ ದೂರು ನೀಡಿದ್ದರು. ಅವರು ನೀಡಿದ ದೂರಿನ ಪ್ರಕಾರ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ನಲ್ಲಿ ದಂಪತಿಯ ಆತ್ಮೀಯ ಕ್ಷಣದ ವಿಡಿಯೋ ಕ್ಲಿಪ್ ಬಂದಿದೆ. ನಂತರ ಕರೆ ಮಾಡಿದ ವ್ಯಕ್ತಿ ವಿಡಿಯೋವನ್ನು ಜಾಲತಾಣದಲ್ಲಿ ಬಿಡುಗಡೆ ಮಾಡದಿರಲು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ನಂದಿನಿ ಠಾಣೆ ಪೊಲೀಸರು, ಅಪರಾಧ ನಿಗ್ರಹದಳ ಮತ್ತು ಸೈಬರ್ ಘಟಕದ ಜಂಟಿ ತಂಡವನ್ನು ತನಿಖೆಗಾಗಿ ರಚಿಸಲಾಗಿದ್ದು, ತಾಂತ್ರಿಕ ಪುರಾವೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಹಿಂದೆ ದಂಪತಿಯ ಮನೆಯಲ್ಲಿ ಎರಡು ಬಾರಿ ಕಳ್ಳತನ ಮಾಡಿದ್ದ ವಿನಯ್ ಕುಮಾರ್ ಮೇ 5ರಂದು ಮತ್ತೆ ಅವರ ಮನೆಗೆ ಹೋಗಿದ್ದ. ಆದರೆ ಕಳ್ಳತನ ಮಾಡುವ ಬದಲು ದಂಪತಿಯ ಆತ್ಮೀಯ ಕ್ಷಣದ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡು ಕೆಲವು ದಿನಗಳ ನಂತರ ವಿಡಿಯೋವನ್ನು ದಂಪತಿಗೆ ಕಳುಹಿಸಿ ಅದನ್ನು ವೈರಲ್ ಮಾಡದಿರಲು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದ.
28 ವರ್ಷದ ವಿನಯ್ ಕುಮಾರ್ ಸಾಹು ಇಂಜಿನಿಯರಿಂಗ್ ಪದವಿ ಮುಗಿಸಿದ್ದ. ಅಹಿವಾರ ನಿವಾಸಿಯಾಗಿರುವ ಆರೋಪಿ ಸಿವಿಲ್ ಸರ್ವೀಸ್‌ಗೆ ತಯಾರಿ ನಡೆಸುತ್ತಿದ್ದ. ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸಿ ರಾಜ್ಯ ಲೋಕಸೇವಾ ಆಯೋಗ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಹಾಜರಾಗಿದ್ದರು. ಸಾಹು ಪ್ರದೇಶದಲ್ಲಿ ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ಕದಿಯಲು ಪ್ರಾರಂಭಿಸಿದ್ದ.
ಆರೋಪಿ ಹಿಂದೆಯೂ ಎರಡು ಬಾರಿ ದಂಪತಿಯ ಮನೆಯಲ್ಲಿ ಕಳ್ಳತನ ಮಾಡಿದ್ದು, ಮೂರನೇ ಬಾರಿ ಕಳ್ಳತನಕ್ಕೆ ಹೋಗಿ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.