ತುಮಕೂರು:
ಕೊರಟಗೆರೆ ಪಟ್ಟಣದಲ್ಲಿ ಜ.30ರಂದು ಮಹಿಳೆಯೊಬ್ಬರು ನೀರಿನ ಸಂಪ್ಗೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮಹಿಳೆಯ ಸಾವು ಆಕಸ್ಮಿಕವಲ್ಲ, ಮಗಳೇ ಹೆತ್ತಮ್ಮನನ್ನು ಕೊಂದಿದ್ದಾಳೆ. ಅಣ್ಣನ ಜತೆಗೆ ಈಕೆಗಿದ್ದ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಾಯಿಯನ್ನೇ ಕೊಂದು ವಿಕೃತಿ ಮೆರೆದಿದ್ದಾಳೆ.
ಪೊಲೀಸ್ ತನಿಖೆಯಲ್ಲಿ ಅಣ್ಣ-ತಂಗಿಯ ಲವ್ವಿಡವ್ವಿ ಬಯಲಾಗಿದೆ.
ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) ಮೃತ ದುರ್ದೈವಿ. ಜ.30ರಂದು ಮನೆ ಬಳಿಯ ನೀರಿನ ಸಂಪ್ಗೆ ಕಾಲುಜಾರಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಸಾವಿತ್ರಮ್ಮರ ಶವ ಪತ್ತೆಯಾಗಿತ್ತು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತಳ ಮಗಳು ಶೈಲಜಾಳ ನಡೆ ಮೇಲೆ ಒಂದು ಕಣ್ಣಿಟ್ಟಿದ್ದ ಪೊಲೀಸರಿಗೆ ಅಸಲಿ ಸತ್ಯ ಬಯಲಾಗಿದೆ.
ಶೈಲಜಾ ಹಾಗೂ ಪುನೀತ್ ಇಬ್ಬರೂ ಪರಸ್ಪರ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು. ವರಸೆಯಲ್ಲಿ ಶೈಲಜಾಗೆ ಪುನೀತ್ ಅಣ್ಣ. ಹೊರಜಗತ್ತಿಗೆ ಇವರಿಬ್ಬರೂ ಅಣ್ಣ-ತಂಗಿಯಂತೆ ವರ್ತನೆ ಮಾಡುತ್ತಿದ್ದರು. ಆದರೆ, ಮನೆಯೊಳಗೆ ಅನೈತಿಕ ಸಂಬಂಧದಲ್ಲಿ ತೊಡಗುತ್ತಿದ್ದರು.
ಇವರಿಬ್ಬರ ಅಸಹ್ಯ ನಡೆ ತಿಳಿದು ಗರಂ ಆದ ಪುನೀತ್ ತಾಯಿ ಮತ್ತು ಶೈಲಜಾ ತಾಯಿ ಬುದ್ಧಿ ಹೇಳಿದ್ದರು. ಅಣ್ಣ-ತಂಗಿ ಸಂಬಂಧ, ಬಾಧವ್ಯದ ಬಗ್ಗೆ ತಿಳಿಹೇಳಿ, ಇನ್ನೊಮ್ಮೆ ಇಂತಹ ಅಸಹ್ಯ ಕೆಲಸದ ಬಗ್ಗೆಯೂ ಯೋಚಿಸಬೇಡಿ. ಇನ್ಮುಂದೆ ನೀವಿಬ್ಬರೂ ಪರಸ್ಪರ ಮೀಟ್ ಮಾಡಬೇಡಿ. ಕಾಲ್, ಮೆಸೇಜ್ ಎಲ್ಲವೂ ಬಂದ್ ಆಗಲಿ ಎಂದು ಎಚ್ಚರಿಕೆ ಕೊಟ್ಟಿದ್ದರು.
ಸ್ವಲ್ಪ ದಿನ ಅಸಹ್ಯ ಕೆಲಸ ಬಿಟ್ಟಂತೆ, ಅಣ್ಣ-ತಂಗಿಯಂತೆ ನಟಿಸಿದ ಶೈಲಜಾ ಮತ್ತು ಪುನೀತ್ ಇಬ್ಬರೂ ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದರು. ತನ್ನ ಮಗಳು ಬದಲಾಗಿದ್ದಾಳೆ ಎಂದೇ ಸಾವಿತ್ರಮ್ಮ ತಿಳಿದಿದ್ದರು. 2022ರ ಜ.29ರ ರಾತ್ರಿ ಶೈಲಜಾ ಮನೆಗೆ ಪುನೀತ್ ಬಂದಿದ್ದ. ಸಾವಿತ್ರಮ್ಮ, ಶೈಲಜಾ ಹಾಗೂ ಪುನೀತ್ ಮೂವರು ಒಟ್ಟಿಗೆ ಊಟ ಮಾಡಿದ್ದರು.
ಪುನೀತ್ ಅದೇ ಮನೆಯಲ್ಲೇ ಮಲಗಿದ್ದ. ಈ ವೇಳೆ ಸಾವಿತ್ರಮ್ಮರ ಕೊಲೆಗೆ ಪುನೀತ್ ಮತ್ತು ಶೈಲಜಾ ಸ್ಕೆಚ್ ಹಾಕಿದ್ದರು. ಇಬ್ಬರೂ ಮಧ್ಯರಾತ್ರಿ ಸಾವಿತ್ರಮ್ಮರ ಕತ್ತು ಹಿಸುಕಿ ಕೊಂದಿದ್ದರು. ಬಳಿಕ ಸಂಪ್ಗೆ ಶವ ಎಸೆದು, ಕಾಲು ಜಾರಿ ಸಂಪ್ಗೆ ಬಿದ್ದು ಮೃತಪಟ್ಟಿದ್ದಾರೆಂದು ಬಿಂಬಿಸಿ ನಾಟಕವಾಡಿದ್ದರು.
ಸಾವಿತ್ರಮ್ಮರ ಅಂತ್ಯಕ್ರಿಯೆ ಮುಗಿದ ಬಳಿಕ ತಾಯಿ ಕಳೆದುಕೊಂಡ ನೋವು ಶೈಲಜಾಗೆ ಇದ್ದಂತೆ ಕಾಣಲಿಲ್ಲ. ತಮ್ಮ ದಾರಿಗೆ ಇದ್ದ ಅಡ್ಡಿ ಮಾಯವಾಯ್ತು ಎಂಬ ಖುಷಿಯಲ್ಲಿ ಪುನೀತ್ ಮತ್ತು ಶೈಲಜಾ ಇಬ್ಬರೂ ಲವ್ವಿಡವ್ವಿ ಮುಂದುವರಿಸಿದ್ದರು. ಪೊಲೀಸರಿಗೆ ಅನುಮಾನ ಬಂದು ಇವರಿಬ್ಬರನ್ನೂ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ