ಮೈಸೂರು
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಅ.3 ರಿಂದ ಅ.12 ರ ವರೆಗೆ ಜರುಗಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ ಮೈಸೂರು ಅರಮನೆ ವೀಕ್ಷಣಗೆ ವಾಟ್ಸಾಪ್ ಟಿಕೆಟ್ ನೀಡಲಾಗುತ್ತಿದೆ. ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ EDCS ಮೊಬೈಲ್ ಒನ್ ಯೋಜನೆಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಪ್ರವಾಸಿಗರು ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ಮೊಬೈಲ್ನಲ್ಲೆ ಅರಮನೆ ವೀಕ್ಷಣೆಗೆ ಟಿಕೆಟ್ ಖರೀದಿ ಮಾಡಬಹುದು. ವಾಟ್ಸಾಪ್ನಲ್ಲಿ 8884160088 ನಂಬರ್ಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳಿಸುವ ಮೂಲಕ ಟಿಕೆಟ್ ಪಡೆಯಬಹುದು. ವಾಟ್ಸಾಪ್ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ. ಇದರಿಂದ ಸರತಿ ಸಾಲಿನಲ್ಲಿ ಬಂದು ಟಿಕೆಟ್ ಖರೀದಿಸುವ ಸಮಯ ಸೇವ್ ಆಗಲಿದೆ.
ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾಗಲಿದ್ದು ಅ.12 ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿ ದಸರಾವನ್ನ ವಿಜೃಂಭಣೆಯಿಂದ, ಆಕರ್ಷಣೆಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇನ್ನು ಈ ಬಾರಿ ದೀಪಾಲಂಕಾರ 21 ದಿನಗಳ ಕಾಲ ಇರಲಿದೆ. ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆಕರ್ಷಿತವಾಗಿ ಅಲಂಕಾರ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಪ್ರವಾಸಿಗರು ಬಂದಾಗ ಮಾರ್ಗದರ್ಶನ ಮಾಡಲು ಸೆಕ್ಯುರಿಟಿ, ಟ್ರಾಫಿಕ್ ಮ್ಯಾನೇಜ್ಮೆಂಟ್ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಗೋಲ್ಡ್ ಕಾರ್ಡ್ ವ್ಯವಸ್ಥೆ, ಉಚಿತವಾಗಿ ದಸರಾ ನೋಡಲು ಬರುವವರಿಗೆ ವ್ಯವಸ್ಥೆ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಇದು ನಾಡಹಬ್ಬ, ಜನಪರ ಉತ್ಸವದಂತೆ ಇರಬೇಕು. ಜನರ ಉತ್ಸವದಂತೆ ಆಚರಣೆ ಮಾಡ್ತೀವಿ. ದಸರಾ ವಿಜೃಂಭಣೆಯಿಂದ ಆಚರಣೆಗೆ ಎಷ್ಟು ಹಣ ಬೇಕೋ ಅಷ್ಟು ಕೊಡ್ತೀವಿ. ಗೋಲ್ಡ್ ಕಾರ್ಡ್ ದುರುಪಯೋಗ ಆಗದಂತೆ ನಾವು ಈ ಬಾರಿ ಕ್ರಮವಹಿಸುತ್ತೇವೆ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.
