ವ್ಹೀಲ್ ಚೇರ್ ಟೆನಿಸ್: ಪ್ರತಿಮಾ-ಶೇಖರ್ ಚಾಂಪಿಯನ್….!

ಬೆಂಗಳೂರು:

   ರಾಜ್ಯಮಟ್ಟದ ವ್ಹೀಲ್ ಚೇರ್ ಟೆನಿಸ್ ಪಂದ್ಯಾವಳಿ-2024ರಲ್ಲಿ ಪ್ರತಿಮಾ ಎನ್ ರಾವ್ ಮತ್ತು ಶೇಖರ್ ವೀರಸ್ವಾಮಿ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

   ಕರ್ನಾಟಕ ವೀಲ್ ಚೇರ್ ಟೆನಿಸ್ ಅಸೋಸಿಯೇಷನ್ (ಕೆಡಬ್ಲ್ಯೂಟಿಎ) ಅ.26 ಮತ್ತು 27ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ನ ಕೆಎಸ್ ಎಲ್ ಟಿಎ ಟೆನಿಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 59 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು.

   3 ವರ್ಷದ ಮಗುವಿದ್ದಾಗಲೇ ಪೊಲಿಯೋಗೆ ಒಳಗಾದ ಪ್ರತಿಮಾ ಅವರು, ಕ್ರೀಡೆಯಲ್ಲಿ ಪಾಲ್ಗೊಂಡು ಈ ವರೆಗೂ 15 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅಪಘಾತದಲ್ಲಿ ಕಾಲು ಕಳೆದುಕೊಂಡ ಶೇಖರ್ ಅವರು ವ್ಹೀಲ್ ಚೇರ್ ಟೆನಿಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 10 ವರ್ಷದ ವಯಸ್ಸಿನ ಬಾಲಕನಾಗಿದ್ದಾಗಿನಿಂದಲೂ ಶೇಖರ್ ಅವರಿಗೆ ಕ್ರೀಡೆಯೆಂದರೆ ಪ್ರೀತಿ. ಕಬ್ಬನ್ ಪಾರ್ಕ್ ಮೇಲಿನ ಪ್ರೀತಿಯೇ ಅವರು ಕ್ರೀಡೆಯತ್ತ ಒಲವು ತೋರುವಂತೆ ಮಾಡಿತ್ತು. ಆದರೆ, 2009ರಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕೊಂಡಾಗ, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

   ನನ್ನ ಜೀವನ ಇನ್ನು ಒಂದು ರೂಮಿನಲ್ಲೇ ಸೀಮಿತ ಎಂದು ಭಾವಿಸಿದ್ದೆ. ಊಟ-ನೀರು ಸೇವನೆ ಬಿಟ್ಟಿದ್ದೆ. ಏನೂ ಬದಲಾಗುವುದಿಲ್ಲ ಎಂದಾದ ಮೇಲೆ ಏನು ಮಾಡಲು ಸಾಧ್ಯವಿಲ್ಲ ಎಂದು ಕುಸಿದಿದ್ದೆ. ಈ ವೇಳೆ ವೀಲ್‌ಚೇರ್ ಟೆನಿಸ್ ಅಸೋಸಿಯೇಷನ್‌ನ ಸದಸ್ಯರಾಗಿದ್ದ ನನ್ನ ಸ್ನೇಹಿತರು, ಆಟವಾಡುವುದನ್ನು ನೋಡಲು ಬರುವಂತೆ ಪ್ರೋತ್ಸಾಹಿಸಿದರು. 2010 ರಲ್ಲಿ ಗಾಲಿಕುರ್ಚಿ ಟೆನಿಸ್ ಆಡಲು ನಿರ್ಧರಿಸಿದ್ದೆ. ಆದರೆ, ಆರಂಭದಲ್ಲಿ ವಿಫಲ ಪ್ರಯತ್ನಗಳಾಯಿತು. ಗಾಲಿ ಕುರ್ಚಿ ಸರಿಸುವುದು ತಿಳಿಯುತ್ತಿರಲಿಲ್ಲ. ಸತತ ಯತ್ನ ಬಳಿಕ 2011ರ ವೇಳೆಗೆ ಸಿಂಗಲ್ಸ್ ಮತ್ತು ಡಬಲ್ಸ್ ಎರಡಲ್ಲೂ ಗೆಲುವು ಸಾಧಿಸಿದೆ. 2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸಿದೆ. 2015 ರಲ್ಲಿ, ಹೈದರಾಬಾದ್‌ನಲ್ಲಿ ಎರಡು ಪದಕಗಳನ್ನು ಗೆದ್ದೆ, ನಂತರ ಥೈಲ್ಯಾಂಡ್‌ನಲ್ಲಿ ಮತ್ತೊಂದು ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದೆ. ಇದೀಗ ವಿಶ್ವ ರ್ಯಾಂಕಿಂಗ್ ನಲ್ಲಿ 246 ರ ಸ್ಥಾನದಲ್ಲಿದ್ದೇನೆಂದು ಶೇಖರ್ ಅವರು ಹೇಳಿದ್ದಾರೆ.

  ಇನ್ನು ಪ್ರತಿಮಾ ಅವರ ಸ್ನೇಹಿತೆಯ ಮೂಲಕ ಗಾಲಿಕುರ್ಚಿ ಟೆನಿಸ್ ಕುರಿತು ಪರಿಚಯವಾಗಿದೆ. 2011ರಲ್ಲಿ KSLTA ಬಗ್ಗೆ ತಿಳಿಯಿತು. ಪ್ರತಿ ವಾರಾಂತ್ಯದಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದ್ದೆ. ವರ್ಷಗಳ ನಂತರ ರಾಷ್ಟ್ರೀಯ ಆಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ 15 ಪ್ರಶಸ್ತಿಗಳನ್ನು ಪಡೆದುಕೊಂಡೆ. ಮಲೇಷ್ಯಾ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಭಾರತದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದೆ. ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಅವರನ್ನು ರೋಲ್ ಮಾಡೆಲ್ ಗಳಾಗಿದ್ದಾರೆ. ಇದೀಗ ಭಾರತದಲ್ಲಿ ವೀಲ್‌ಚೇರ್ ಟೆನಿಸ್‌ನಲ್ಲಿ 2 ನೇ ಸ್ಥಾನದಲ್ಲಿ ಗಳಿಸಿದ್ದೇನೆಂದು ಪ್ರತಿಮಾ ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link