ಬೆಂಗಳೂರು:
ರಾಜ್ಯ ವಿಧಾನಸಭೆ, ಪರಿಷತ್ ವಿಪಕ್ಷ ನಾಯಕ ಆಯ್ಕೆ, ಪ್ರತಿಪಕ್ಷಗಳ ನಾಯಕ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ಚರ್ಚೆಗಳು ನಡೆಸಿದ್ದು, ಆದರೂ, ಇನ್ನೂ ಈ ಕುರಿತು ಯಾವುದೇ ರೀತಿಯ ಅಂತಿಮ ನಿರ್ಧಾರಗಳಾಗಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಕೇಂದ್ರದ ವೀಕ್ಷಕರಾಗಿ ವಿನೋದ್ ತಾವೆ, ಮನ್ಸೂಖ್ ಮಾಂಡವೀಯ ಅವರನ್ನು ಆಯ್ಕೆ ಮಾಡಿದ್ದು, ಇಬ್ಬರೂ ನಾಯಕರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ವೀಕ್ಷಕರು ರಾಜ್ಯ ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದು, ವರದಿ ಪರಿಶೀಲಿಸಿದ ಬಳಿಕ ವಿಪಕ್ಷ ನಾಯಕರು ಯಾರು ಎಂಬುದರ ಕುರಿತು ನಿರ್ಧಾರಗಳಾಗಲಿವೆ ಎಂದು ತಿಳಿದುಬಂದಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ಇನ್ನೂ 2-3 ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ವಿಪಕ್ಷ ನಾಯಕನ ಸ್ಥಾನ ವೀರಶೈವ-ಲಿಂಗಾಯತರಿಗೆ ಬಂದಿದ್ದೇ ಆದರೆ, ಆರ್‌ಎಸ್‌ಎಸ್‌ನಲ್ಲಿ ಬೇರೂರಿರುವ ಒಕ್ಕಲಿಗ ನಾಯಕರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳ ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ,
ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸಿ.ಟಿ.ರವಿ, ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ರೇಸ್ ನಲ್ಲಿದ್ದಾರೆ.ಮಾಜಿ ಸಚಿವ ಸುನೀಲ್ ಕುಮಾರ್ ಅವರಿಗೆ ಆರ್ಎಸ್ಎಸ್ ಬೆಂಬಲವಿದ್ದು, ಅವರಿಗೂ ಒಂದಷ್ಟು ಜವಾಬ್ದಾರಿ ನೀಡುವ ಸಾಧ್ಯತೆಗಳುವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡುವುದಕ್ಕೂ ಮುನ್ನ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಮಾತುಕತೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
