ನಿಗೂಢವಾದ ಸಂಸದ ಪ್ರಜ್ವಲ್‌ ನಡೆ….!

ಬೆಂಗಳೂರು: 

     ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಮೇ 15 ರಂದು ಜರ್ಮನಿಯಿಂದ ಬೆಂಗಳೂರಿಗೆ ಬರಲು ಕಾಯ್ದಿರಿಸಿದ್ದ ವಿಮಾನದ ಟಿಕೆಟನ್ನೂ ರದ್ದುಗೊಳಿಸಿ ದ್ದಾರೆ. ಹೀಗಾಗಿ ಇನ್ನೇನು 2 ದಿನಗಳಲ್ಲಿ ಅವರು ವಾಪಸ್‌ ಬರಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದ್ದು, ಸಂಸದನ ಪತ್ತೆಯೇ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೊಡ್ಡ ಸವಾಲಾಗಿದೆ.

    ಎಸ್‌ಐಟಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಪ್ರಜ್ವಲ್‌ ವಿದೇಶದಲ್ಲಿ ಇರುವ ಪ್ರದೇಶವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಜ್ವಲ್‌ ಮೇ 15ರಂದು ಜರ್ಮನಿಯಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ಟಿಕೆಟ್‌ ಕಾಯ್ದಿರಿಸಿದ್ದರು ಎನ್ನಲಾಗಿದೆ. ಈಗ ದಿಢೀರ್‌ ಟಿಕೆಟ್‌ ರದ್ದುಗೊಳಿಸಿದ್ದಾರೆ. ಈ ಹಿಂದೆ ಮೇ 3ರ ವಿಮಾನದ ಟಿಕೆಟನ್ನು ಮೇ 15ಕ್ಕೆ ಮುಂದೂಡಿದ್ದರು. ಈಗ ಟಿಕೆಟ್‌ ದಿಢೀರ್‌ ರದ್ದುಗೊಳಿಸಿದ್ದಾರೆ. ಎಸ್‌ಐಟಿಯನ್ನು ದಿಕ್ಕು ತಪ್ಪಿಸಲು ಪ್ರಜ್ವಲ್‌ ಈ ರೀತಿ ಮಾಡುತ್ತಿದ್ದಾರೆಯೇ ಅಥವಾ ಸದ್ಯದ ಬೆಳವಣಿಗೆ ಗಮನಿಸಿ ಮಾಡಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ತನಿಖಾಧಿಕಾರಿಗಳಲ್ಲಿ ಹುಟ್ಟಿಕೊಂಡಿವೆ. ಪ್ರಜ್ವಲ್‌ ಸದ್ಯ ಬೆಂಗಳೂರಿಗೆ ವಾಪಸಾಗುವುದು ಅನುಮಾನ ಎನ್ನಲಾಗುತ್ತಿದೆ.

    ಪ್ರಕರಣವು ಎಸ್‌ಐಟಿ ಅಂಗಳಕ್ಕೆ ಬರುವ ಮುನ್ನವೇ ಪ್ರಜ್ವಲ್‌ ಜರ್ಮನಿಗೆ ಹಾರಿದ್ದರು. ಸದ್ಯ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲು ಎಸ್‌ಐಟಿಗೆ ಸಾಧ್ಯವಾಗುತ್ತಿಲ್ಲ. ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದ್ದರೂ ಪ್ರಜ್ವಲ್‌ ವಿಮಾನ, ಹಡಗಿನಲ್ಲಿ ಪ್ರಯಾಣಿಸದ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಣ್ಣ ಸುಳಿವು ಕೂಡ ಎಸ್‌ಐಟಿಗೆ ಸಿಕ್ಕಿಲ್ಲ. ವಿದೇಶದಲ್ಲಿ ಇರುವುದರಿಂದ ಅವರನ್ನು ಪತ್ತೆ ಹಚ್ಚಿ ಬಂಧಿಸುವುದೇ ಎಸ್‌ಐಟಿಗೆ ಸವಾಲಾಗಿದೆ.

     ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಶಾಸಕ ಎಚ್‌.ಡಿ. ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ. ರೇವಣ್ಣ ಅವರಿಗೆ ಜಾಮೀನು ಸಿಗಲಿದೆಯೇ ಅಥವಾ ಅರ್ಜಿ ವಜಾ ಆಗಲಿದೆಯೇ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap