ಗುವಾಹಟಿ:
ದಕ್ಷಿಣ ಆಫ್ರಿಕಾ ಎದುರು ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಭಾರತ ತಂಡ ಹೀನಾಯ ಸೋಲಿನ ಭೀತಿಗೆ ಒಳಗಾಗಿದೆ. ಈಗಾಗಲೇ ಮೊದಲನೇ ಟೆಸ್ಟ್ ಪಂದ್ಯವನ್ನು ಸೋತಿರುವ ಟೀಮ್ ಇಂಡಿಯಾ , ಇದೀಗ ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಸೋತು, ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವೈಟ್ವಾಷ್ ಆಘಾತ ಅನುಭವಿಸುವ ಆತಂಕಕ್ಕೆ ಸಿಲುಕಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 549 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 15.5 ಓವರ್ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ. ಐದನೇ ದಿನವಾದ ಸೋಮವಾರ ಆತಿಥೇಯರಿಗೆ ಗೆಲ್ಲಲು ಇನ್ನೂ 522 ರನ್ಗಳ ಅಗತ್ಯವಿದೆ. ಆದರೆ, ಮಾರ್ಕೊ ಯೆನ್ಸನ್ ಹಾಗೂ ಸೈಮನ್ ಹಾರ್ಮರ್ ಒಳಗೊಂಡ ಪ್ರವಾಸಿ ತಂಡದ ಬೌಲಿಂಗ್ ಪಡೆ ಬಲಿಷ್ಠವಾಗಿರುವ ಕಾರಣ ಭಾರತ ತಂಡ ಐದನೇ ದಿನಪೂರ್ತಿ ಬ್ಯಾಟಿಂಗ್ ನಡೆಸುವುದು ಅನುಮಾನ.








