ಭಾರತ-ಇಂಗ್ಲೆಂಡ್​ ಸೆಮೀಸ್​ಗೆ ಮಳೆ ಭೀತಿ : ಫೈನಲ್‌ ಗೆ ಹೋಗೋದು ಯಾರು…?

ಯಾನಾ: 

    ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಟೂರ್ನಿಯುದ್ದಕ್ಕೂ ಕಾಡುತ್ತ ಮತ್ತು ಲಿತಾಂಶಗಳನ್ನು ಏರುಪೇರು ಮಾಡುತ್ತ ಬಂದಿರುವ ಮಳೆ ಈ ಮಹತ್ವದ ಪಂದ್ಯಕ್ಕೂ ಅಡಚಣೆ ತರುವ ಭೀತಿ ಇದೆ.ಭಾರಿ ಮಳೆಯಿಂದಾಗಿ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ.

    ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ. ದ. ಆಫ್ರಿಕಾ-ಅಫ್ಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿದ್ದರೂ, ಭಾರತ-ಇಂಗ್ಲೆಂಡ್​ ನಡುವಿನ 2ನೇ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೀಗಾಗಿ ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡವೇ ಫೈನಲ್​ಗೇರಲಿದೆ. ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದ್ದು ಇದಕ್ಕೆ ಕಾರಣ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು.

   ಸೂಪರ್​-8ನಲ್ಲಿ ಭಾರತ ಯಾವುದೇ ಸ್ಥಾನ ಪಡೆದರೂ, ಜೂನ್​ 27ಕ್ಕೆ ಗಯಾನಾದಲ್ಲಿನ 2ನೇ ಸೆಮಿಫೈನಲ್​ನಲ್ಲೇ ಆಡಲಿದೆ ಎಂದು ಐಸಿಸಿ ಮೊದಲೇ ತೀರ್ಮಾನಿಸಿತ್ತು. ಈ ಪಂದ್ಯ ಭಾರತೀಯ ವೀಕ್ಷಕರಿಗೆ ಅನುಕೂಲಕರ ಸಮಯದಲ್ಲಿ (ರಾತ್ರಿ 8) ನಿಗದಿಯಾಗಿರುವುದು ಇದಕ್ಕೆ ಕಾರಣ. ಇದೇ ವೇಳೆ, ಫೈನಲ್​ ಪಂದ್ಯ ಶನಿವಾರವೇ ನಡೆಯಲಿರುವುದರಿಂದ, 2ನೇ ಸೆಮೀಸ್​ಗೆ ಮೀಸಲು ದಿನವಿಲ್ಲ ಎಂದೂ ಸ್ಪಷ್ಟಪಡಿಸಿತ್ತು.

   ಆದರೆ 2ನೇ ಸೆಮಿಫೈನಲ್​ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್​ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್​ಗಳ ಪಂದ್ಯ ಆಡಬೇಕಾಗಿದೆ. ಲೀಗ್​, ಸೂಪರ್​-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್​ಗಳ ಪಂದ್ಯ ಸಾಕಾಗಿತ್ತು.

   ಜೂನ್​ 29ಕ್ಕೆ ಬ್ರಿಜ್​ಟೌನ್​ನಲ್ಲಿ ನಿಗದಿಯಾಗಿರುವ ಫೈನಲ್​ಗೆ ಜೂನ್​ 30 (ಭಾನುವಾರ) ಮೀಸಲು ದಿನವಾಗಿದೆ. ಮಳೆ ಕಾಡಿದರೆ ಎರಡೂ ದಿನ 190 ನಿಮಿಷ ಹೆಚ್ಚುವರಿ ಸಮಯ ನಿಗದಿಪಡಿಸಲಾಗಿದೆ. ಫೈನಲ್​ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 10 ಓವರ್​ ಆಡಬೇಕು. ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ, ಫೈನಲ್​ಗೇರಿದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್​ ಎಂದು ಐಸಿಸಿ ಘೋಷಿಸಲಿದೆ.

     ಆಫ್ರಿಕಾ-ಆಫ್ಘನ್​ ನಡುವಿನ ಮೊದಲ ಸೆಮೀಸ್​ಗೆ ಮೀಸಲು ದಿನವಿದೆ. ಸ್ಥಳಿಯ ಕಾಲಮಾನದಂತೆ ಬುಧವಾರ ರಾತ್ರಿ ನಿಗದಿಯಾಗಿರುವ ಈ ಪಂದ್ಯಕ್ಕೆ ಗುರುವಾರ ಮೀಸಲು ದಿನವಾಗಿದೆ. ಅಂದರೆ ಭಾರತೀಯ ಕಾಲಮಾನ ಪ್ರಕಾರ ಎರಡೂ ಗುರುವಾರವೇ ಆಗಿದೆ. ಮೀಸಲು ದಿನ ಸ್ಥಳಿಯ ಕಾಲಮಾನ ಮಧ್ಯಾಹ್ನ 2ಕ್ಕೆ ಪಂದ್ಯ ಶುರುವಾಗಲಿದೆ. ಅಂದರೆ ಭಾರತದಲ್ಲಿ ಗುರುವಾರ ರಾತ್ರಿ 11.30ರಿಂದ ಪಂದ್ಯ ನಡೆಯಲಿದೆ. ಮೊದಲ ಸೆಮೀಸ್​ಗೆ ಪಂದ್ಯದ ದಿನ 60 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದ್ದರೆ, ಮೀಸಲು ದಿನ 190 ನಿಮಿಷ ಹೆಚ್ಚುವರಿ ಸಮಯವಿದೆ. ಮೊದಲ ಸೆಮೀಸ್​ ಮೀಸಲು ದಿನವೂ ರದ್ದಾದರೆ ದ. ಆಫ್ರಿಕಾ ಫೈನಲ್​ಗೇರಲಿದೆ.

     ಆಸ್ಟ್ರೆಲಿಯಾ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​-8 ಹಂತದಲ್ಲೇ ಹೊರದಬ್ಬುವ ಮೂಲಕ ಭಾರತ ತಂಡ 2023ರ ತವರಿನ ಏಕದಿನ ವಿಶ್ವಕಪ್​ ಫೈನಲ್​ ಸೋಲಿಗೆ ಸೇಡು ತೀರಿಸಿಕೊಂಡಿದೆ. ಇದೀಗ 2022ರ ಟಿ20 ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಸೋಲಿಗೆ ಇಂಗ್ಲೆಂಡ್​ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಎದುರಾಗಿದೆ. ಅಡಿಲೇಡ್​ನಲ್ಲಿ ನಡೆದ ಕಳೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಭಾರತ 6 ವಿಕೆಟ್​ಗೆ 168 ರನ್​ ಪೇರಿಸಿದ್ದರೆ, ಇಂಗ್ಲೆಂಡ್​ 16 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ 170 ರನ್​ ಗಳಿಸಿ ಗೆದ್ದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap