ಬಿಗ ಬಾಸ್‌ ಮುಂದಿನ ಸಾರಥಿ ಯಾರು ……?

ಬೆಂಗಳೂರು 

   ಬಿಗ್​ಬಾಸ್ ಸೀಸನ್ ಮತ್ತೊಮ್ಮೆ ಪ್ರಾರಂಭವಾಗಿದೆ. ಈಗಾಗಲೇ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಆದರೆ ಪ್ರೋಮೋನಲ್ಲಿ ಸುದೀಪ್ ಕಂಡಿಲ್ಲ, ಮಾತ್ರವಲ್ಲ ಸುದೀಪ್ ಬದಲು ಬೇರೊಬ್ಬ ನಿರೂಪಕರು ಇರುವ ಸಣ್ಣ ಸುಳಿವನ್ನು (ಅಥವಾ ದಾರಿತಪ್ಪಿಸುವ ತಂತ್ರ) ಕಲರ್ಸ್ ವಾಹಿನಿ ನೀಡಿದೆ. ಇದರ ನಡುವೆ ಸುದೀಪ್ ಅಲ್ಲದಿದ್ದರೆ ಇನ್ಯಾರು ಎಂಬ ಪ್ರಶ್ನೆ ನೋಡುಗರಲ್ಲಿ ಹುಟ್ಟಿಕೊಂಡಿದೆ. ಸುದೀಪ್, ಬಿಗ್​ಬಾಸ್ ನಿರೂಪಣೆ ಮಾಡದಿದ್ದ ಪಕ್ಷದಲ್ಲಿ ನಟ ರಮೇಶ್ ಅರವಿಂದ್ ಬಿಗ್​ಬಾಸ್ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದೀಗ ಸ್ವತಃ ನಟ ರಮೇಶ್ ಅರವಿಂದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ಬಿಗ್​ಬಾಸ್ ನಿರೂಪಣೆ ಮಾಡುವ ಆಫರ್ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಅರವಿಂದ್, ‘ಆ ರೀತಿಯ ಯಾವುದೇ ಆಫರ್ ಬಂದಿಲ್ಲ, ಆ ಬಗ್ಗೆ ಚರ್ಚೆ ಸಹ ನಡೆಸಲಾಗಿಲ್ಲ. ನನ್ನ ಹಾದಿ ಬೇರೆ ಇದೆ, ನಾನು ‘ಪ್ರೀತಿಯಿಂದ ರಮೇಶ್’, ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಬಿಗ್​ಬಾಸ್ ನಿರೂಪಣೆ ಮಾಡುತ್ತಿಲ್ಲ. ಆ ರೀತಿಯ ಯಾವುದೇ ಆಫರ್ ಸಹ ನನಗೆ ಬಂದಿಲ್ಲ’ ಎಂದಿದ್ದಾರೆ.

   ಇನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೆಸರು ಸಹ ಬಿಗ್​ಬಾಸ್ ನಿರೂಪಣೆ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ‘ಕಾಂತಾರ’ ಸಿನಿಮಾದ ಬಳಿಕ ರಿಷಬ್ ಶೆಟ್ಟಿಗೆ ದೊಡ್ಡ ಮಟ್ಟದ ಜನಪ್ರಿಯತೆ ಬಂದಿದೆ. ದೇಶದೆಲ್ಲೆಡೆ ಅವರನ್ನು ಜನ ಗುರುತಿಸುತ್ತಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ಬಳಿ ಒಳ್ಳೆಯ ಮಾತುಗಾರಿಕೆಯೂ ಇದೆ. ರಿಷಬ್ ಶೆಟ್ಟಿ ಈ ವರೆಗೂ ಯಾವುದೇ ಟಿವಿ ಶೋ ನಿರೂಪಣೆ ಮಾಡಿಲ್ಲ. ಹಾಗಾಗಿ ಅವರನ್ನು ನಿರೂಪಣೆಗೆ ಕರೆತರಬಹುದು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. 

   ಇನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಹೆಸರೂ ಸಹ ಕೇಳಿ ಬರುತ್ತಿದೆ. ಗಣೇಶ್, ಬಹಳ ಲೈವ್ಲಿಯಾದ ಮಾತುಗಾರ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುಂಚೆಯೂ ಅವರು ತಮ್ಮ ಚುರುಕಾದ ಮಾತುಗಳಿಂದ ಮನೆ-ಮನೆ ಮಾತಾಗಿದ್ದರು. ನಟನಾದ ಬಳಿಕವೂ ಕೆಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ನಟ ಗಣೇಶ್. ಇನ್ನು ಡಾಲಿ ಧನಂಜಯ್ ಹೆಸರು ಸಹ ಕೇಳಿ ಬರುತ್ತಿದೆ. ಡಾಲಿ ಸಹ ಶಕ್ತ ಮಾತುಗಾರ. ಕಿಚ್ಚ ಸುದೀಪ್ ರೀತಿಯಲ್ಲಿಯೇ ಗಂಭೀರವಾಗಿ, ಪ್ರಭಾವ, ಪರಿಣಾಮ ಬೀರುವಂತೆ ಡಾಲಿ ಧನಂಜಯ್ ಮಾತನಾಡಬಲ್ಲರು.

   ತಮಿಳು ಬಿಗ್​ಬಾಸ್​ನ ನಿರೂಪಕರಾಗಿದ್ದ ಕಮಲ್ ಹಾಸನ್ ಅವರನ್ನು ಬದಲಾಯಿಸಿ ವಿಜಯ್ ಸೇತುಪತಿ ಅವರನ್ನು ನಿರೂಪಕರನ್ನಾಗಿ ಮಾಡಲಾಗಿದೆ. ಇದೀಗ ಕನ್ನಡದಲ್ಲಿಯೂ ಬದಲಾವಣೆ ಮಾತುಗಳು ಕೇಳಿ ಬರುತ್ತಿವೆ. ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್ ಧ್ವನಿ ಇಲ್ಲ, ಬದಲಿಗೆ ಬೇರೆ ಯಾರೋ ನಗುತ್ತಿರುವ ಧ್ವನಿ ಕೇಳಿ ಬರುತ್ತಿದೆ. ಏನಾಗುತ್ತದೆಯೋ ಕಾದು ನೋಡಬೇಕಿದೆ.

 

Recent Articles

spot_img

Related Stories

Share via
Copy link
Powered by Social Snap