ಜಾರ್ಖಂಡ್
ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. 81 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 13ರಂದು ಮೊದಲ ಹಂತದ ಚುನಾವಣೆ ನಡೆಲಿದೆ. ಎಲ್ಲಾ ಪಕ್ಷಗಳು ಈಗಾಗಲೇ ಕೊನೆಯ ಸುತ್ತಿನ ಭರ್ಜರಿ ಪ್ರಚಾರ ನಡೆಸುತ್ತಿವೆ.ನರಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿಯಂತ ಘಟಾನುಘಟಿ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಮಾಡಿದ್ದು, ಜಾರ್ಖಂಡ್ ರಾಜ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಲೋಕ್ ಪೋಲ್ ತನ್ನ ಚುನಾವಣಾ ಪೂರ್ವ ಮೆಗಾ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಲೋಕ್ ಪೋಲ್ ಸಮೀಕ್ಷೆಯು ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ಎರಡಕ್ಕೂ ಆಘಾತ ಕೊಟ್ಟಿದೆ.
ಲೋಕ್ ಪೋಲ್ ಸಮೀಕ್ಷೆ ಪ್ರಕಾರ ಜಾರ್ಖಂಡ್‌ನಲ್ಲಿ ಎನ್‌ಡಿಎ, ಇಂಡಿಯಾ ಒಕ್ಕೂಟದ ನಡುವೆ ಅಧಿಕಾರಕ್ಕೆ ಭಾರಿ ಪೈಪೋಟಿ ನಡೆಯಲಿದ್ದು, ಇಂಡಿಯಾ ಒಕ್ಕೂಟ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಲೋಕ್ ಪೋಲ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 36-39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಇಂಡಿಯಾ ಒಕ್ಕೂಟ 41-44 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಿದೆ. ಪಕ್ಷೇತರ, ಇತರೆ ಅಭ್ಯರ್ಥಿಗಳು 03-04 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿದೆ.
ಸರಳ ಬಹುಮತಕ್ಕೆ 42 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಇಂಡಿಯಾ ಒಕ್ಕೂಟ ಸರಳ ಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆ ಇಂಡಿಯಾ ಒಕ್ಕೂಟದ ವಿಶ್ವಾಸ ಹೆಚ್ಚಿಸಿದರೂ, ಎಚ್ಚರಿಕೆಯ ಸಂದೇಶವನ್ನೂ ನೀಡಿದೆ, ಎನ್‌ಡಿಎ ಕೂಡ ಬಹುಮತಕ್ಕೆ ಬೆರಳೆಣಿಕೆ ಸ್ಥಾನಗಳು ಕಡಿಮೆಯಿದ್ದು ಅಂತಿಮವಾಗಿ ಏನು ಬೇಕಾದರೂ ಆಗಬಹುದು ಎನ್ನುವ ಸೂಚನೆ ಸಿಕ್ಕಿದೆ.
ಮಯ್ಯಾ ಸಮ್ಮಾನ್ ಯೋಜನೆ ಮೂಲಕ ಮಹಿಳೆಯರ ಮತಗಳನ್ನು ಸೆಳೆಯುವಲ್ಲಿ ಇಂಡಿಯಾ ಒಕ್ಕೂಟ ಯಶಸ್ವಿಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಬುಡಕಟ್ಟು ಜನ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದು, ಇಂಡಿಯಾ ಒಕ್ಕೂಟಕ್ಕೆ ವರದಾನವಾಗಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಆದರೆ ನಗರ ಪ್ರದೇಶಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರೆಸಲಿದೆ. ಬಾಂಗ್ಲಾದೇಶಿ ಮುಸ್ಲಿಮರನ್ನು ರಾಜ್ಯದಿಂದ ಹೊರಹಾಕುತ್ತೇವೆ ಎಂದು ಬಿಜೆಪಿ ಹೇಳಿರುವ ಕಾರಣ, ಮುಸ್ಲಿಮರ ಮತಗಳು ಇಂಡಿಯಾ ಬ್ಲಾಕ್ ಪಾಲಾಗಲಿವೆ ಎಂದು ಸಮೀಕ್ಷೆಯು ತಿಳಿಸಿದೆ.
ಕಳೆದ ಬಾರಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು, ಎರಡನೇ ಬಾರಿ ಅಧಿಕಾರ ಹಿಡಿಯಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜ್ಯದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಹರಿಯಾಣ ಗೆದ್ದ ಖುಷಿಯಲ್ಲಿರುವ ಬಿಜೆಪಿ ಜಾರ್ಖಂಡ್‌ನಲ್ಲಿ ಗೆಲುವು ಸಾಧಿಸಲು ಮುಖ್ಯ ನಾಯಕರನ್ನು ಪ್ರಚಾರಕ್ಕೆ ಇಳಿಸಿದೆ.