ಕಾಪು : ಇರುವ ಆಕಾಂಕ್ಷಿಗಳಲ್ಲಿ ಟಿಕೆಟ್‌ ಯಾರಿಗೆ…?

ಡುಪಿ:

     ವಿಧಾನಸಭಾ ಚುನಾವಣೆ ಸನ್ನಿಹದಲ್ಲಿ ಇರುವಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಬಹುದಾದ ಉಡುಪಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಪು ಕೂಡ ಒಂದಾಗಿದೆ.

      2013ರ ಚುನಾವಣೆಯಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್‌ ವಿರುದ್ಧ ಕಾಂಗ್ರೆಸ್‌ನ ವಿನಯ ಕುಮಾರ್‌ ಸೊರಕೆಯವರು 1,855 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರೆ, 2018ರಲ್ಲಿ ವಿನಯ ಕುಮಾರ್‌ ಸೊರಕೆ ವಿರುದ್ಧ ಲಾಲಾಜಿ ಆರ್‌. ಮೆಂಡನ್‌ ಅವರು 11,917 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

   ಬಿಜೆಪಿಯಿಂದ ಸ್ಪರ್ಧಿಸಲು ಹಾಲಿ ಶಾಸಕ ಲಾಲಾಜಿ ಮೆಂಡನ್‌ ಉತ್ಸುಕರಾಗಿದ್ದರೆ, ನಾಯಕರಾದ ಗುರ್ಮೆ ಸುರೇಶ ಶೆಟ್ಟಿ, ಯಶಪಾಲ್‌ ಸುವರ್ಣ, ಕುಯಿಲಾಡಿ ಸುರೇಶ ನಾಯಕ್‌ ಮೊದಲಾದವರ ಹೆಸರು ಕೇಳಿಬರುತ್ತಿದೆ.

    ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಈ ಕ್ಷೇತ್ರದಲ್ಲಿ ದಿನೇದಿನೆ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿವೆ. ಹಾಲಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೆಸರು ಮೊದಲಿದ್ದು ಕ್ಷೇತ್ರದಲ್ಲಿ ವ್ಯಾಪಕ ಸಂಚಾರ ನಡೆಸುವುದರ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿಯವರು ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ.

ಟಿಕೆಟ್‌ ಪಡೆಯಲು ಬೇಕಾದ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಬೈಂದೂರು ಅಥವಾ ಕುಂದಾಪುರ ಕ್ಷೇತ್ರದಲ್ಲಿ ಬಂಟ ಸಮುದಾಯಕ್ಕೆ ಟಿಕೆಟ್‌ ತಪ್ಪಿದಲ್ಲಿ ಇಲ್ಲೊಂದು ಬಂಟ ಸಮುದಾಯಕ್ಕೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ. ಆಗ ಗುರ್ಮೆಯವರ ಹೆಸರು ಪ್ರಮುಖವಾಗಿ ಪರಿಗಣಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ. ಸುವರ್ಣ ಹಿಂದೂ ಸಂಘಟನೆಗಳಲ್ಲೂ ಸಕ್ರಿಯವಾಗಿರುವ ಜತೆಗೆ ಹಿಜಾಬ್‌ ಗಲಾಟೆಯ ಅನಂತರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಮುನ್ನೆಲೆಗೆ ಬಂದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರು ಕ್ಷೇತ್ರದ ಉಸ್ತುವಾರಿಯೂ ಇವರ ಹೆಗಲ ಮೇಲಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ‌ ಶ್ರೀಶ ನಾಯಕ್‌, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ ಮೊದಲಾದವರು ಟಿಕೆಟ್‌ಗೆ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಜೆಡಿಎಸ್‌ನಿಂದ ಜಿಲ್ಲಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಹಾಗೂ ಮುಖಂಡರಾದ ಸಂಕಪ್ಪ ಸ್ಪರ್ಧೆಯಲ್ಲಿದ್ದಾರೆ. ಎಸ್‌ಡಿಪಿಐನಿಂದ ಹನೀಫ್ ಮೂಳೂರು ಪ್ರಚಾರ ಪ್ರಕ್ರಿಯೆ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಯ ಆಯ್ಕೆಯೇ ತುಸು ತ್ರಾಸವಾಗಬಹುದು. ಅಚ್ಚರಿಯ ಆಯ್ಕೆಯಿಂದ ಬಂಡಾಯದ ಬಿಸಿಯೂ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಾಪು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಎಂಬುದು ಪಕ್ಷದ ಕಾರ್ಯಕರ್ತರಲ್ಲಿ ಅಚ್ಚಾಗಿದೆ. ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಸದ್ಯ ಎಲ್ಲರ ಲ್ಲೂ ಗೊಂದಲವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ವಿಳಂಬವಾಗಿತ್ತು. ಈ ಬಾರಿಯೂ ಅದೇ ತಂತ್ರವನ್ನು ಬಿಜೆಪಿ ವರಿಷ್ಠರು ಅನು ಸರಿಸಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ಸೊರಕೆಯವರೇ ಮುಂಚೂಣಿ
ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರು ಅಭ್ಯರ್ಥಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸೊರಕೆಯವರು ಈಗಾಗಲೇ ಕ್ಷೇತ್ರಾದ್ಯಂತ ಪ್ರಚಾರ ಆರಂಭಿಸಿದ್ದಾರೆ. ಪ್ರಜಾಧ್ವನಿ ಯಾತ್ರೆ, ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷದ ವರಿಷ್ಠರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಕಾಂಗ್ರೆಸ್‌ನಿಂದ ಇವರ ಹೆಸರು ಮಾತ್ರ ಕೇಳಿಬರುತ್ತಿದೆ. ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್‌ ಕೋಟ್ಯಾನ್‌ ಅವರೂ ಇದೇ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿನಯ ಕುಮಾರ್‌ ಅವರು ತಾವೇ ಕಾಂಗ್ರೆಸ್‌ ಅಭ್ಯರ್ಥಿ ಎಂಬ ನೆಲೆಯಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap