ಕುಸಿಯುತ್ತಿರುವ ಕೊಬ್ಬರಿ ದರ : ಹೆಚ್ಚಳಕ್ಕಾಗಿ ರೈತರ ಪ್ರತಿಭಟನೆ

ತುಮಕೂರು:

     ಕೊಬ್ಬರಿ ದರ ಕಳೆದ ಒಂದು ವಾರದಿಂದ ಮತ್ತಷ್ಟು ಕುಸಿತ ಕಂಡಿದ್ದು, 9 ಸಾವಿರ ರೂ.ಗಳ ತನಕ ಬಂದು ನಿಂತಿದೆ. ಈ ನಡುವೆ ಕಳೆದ ಒಂದು ವಾರದಿಂದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಹೆಚ್ಚಳಕ್ಕಾಗಿ ರೈತರ ಧರಣಿ ಮುಂದುವರೆದಿದೆ.

    ಒಂದು ವರ್ಷದಿಂದ ಇಳಿಮುಖವಾಗುತ್ತಿರುವ ಕೊಬ್ಬರಿ ದರದಿಂದಾಗಿ ಇದನ್ನೇ ನಂಬಿ ಬದುಕು ಸಾಗಿಸುತ್ತಿರುವ ತೆಂಗು ಬೆಳೆಗಾರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪರ್ಯಾಯ ಮಾರ್ಗಗಳನ್ನು ಹುಡುಕಲು ಹೊರಟಿದ್ದಾರೆ. ಬಹಳಷ್ಟು ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಹೋಗುತ್ತಿದ್ದಾರೆ. ಗಂಡು ಮಕ್ಕಳೂ ಸಹ ನಗರ ಪ್ರದೇಶದ ಕನಿಷ್ಠ ದುಡಿಮೆಗೆ ಸೇರಿಕೊಳ್ಳುತ್ತಿದ್ದಾರೆ. ಕುಟುಂಬದ ಇತರೆ ಖರ್ಚುಗಳು ಈ ವಲಯವನ್ನು ಬಾಧಿಸುತ್ತಿವೆ. ಇನ್ನೂ ವಿಚಿತ್ರವೆಂದರೆ ತೆಂಗು ಬೆಳೆ ಬೆಳೆಗಾರ ಎಂದಷ್ಟೇ ಹೇಳಿಕೊಂಡರೆ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಪರ್ಮನೆಂಟ್ ಉದ್ಯೋಗ ಯಾವುದು ಹೇಳಿ ಎಂದು ಕೇಳುತ್ತಿದ್ದಾರೆ.

    ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 8400 ರೂ.ಗಳಿಗೆ ಹಾಗೂ ಗರಿಷ್ಠ 10 ಸಾವಿರ ರೂ.ಗಳಿಗೆ ಕ್ವಿಂಟಾಲ್ ಕೊಬ್ಬರಿ ಮಾರಾಟವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಕುಸಿತದ ಹಾದಿಯಲ್ಲೇ ಇದ್ದ ಕೊಬ್ಬರಿ ಧಾರಣೆ ಫೆಬ್ರವರಿ ನಂತರ ಏರಿಕೆಯಾಗುವುದೆಂಬ ವದಂತಿಗಳು ಕೇಳಿಬಂದಿದ್ದವು. ಶೀತದ ಕಾಲ ಮುಗಿದು ಬೇಸಿಗೆಯ ದಿನಗಳು ಹೆಚ್ಚಿದಂತೆ ಧಾರಣೆಯೂ ಹೆಚ್ಚಳವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವದಂತಿಗಳನ್ನು ನಂಬಿ ಜಿಲ್ಲೆಯ ತೆಂಗು ಬೆಳೆಗಾರರು ಕೊಬ್ಬರಿ ಮಾರಾಟವನ್ನು ಮುಂದೂಡುತ್ತಾ ಬಂದರು. ಈಗ ಇವರೆಲ್ಲ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.

    ಧರಣಿ- ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ರೈತರ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ. ಸರ್ಕಾರಿ ನೌಕರರು ಕೇವಲ ಅರ್ಧದಿನ ಪ್ರತಿಭಟನೆಗೆ ಇಳಿದ ಕೂಡಲೇ ಸರ್ಕಾರ ಗಡಗಡ ನಡುಗಿತು. ಅವರ ಬೇಡಿಕೆಗಳನ್ನು ಕೆಲವೇ ಗಂಟೆಗಳಲ್ಲಿ ಈಡೇರಿಸಿತು. ಆದರೆ ಅಸಂಘಟಿತ ವಲಯದ ರೈತರ ಕೂಗನ್ನು ಕೇಳಿಸಿಕೊಳ್ಳುವವರು ಯಾರು ಎನ್ನುತ್ತಾರೆ ಪ್ರಗತಿಪರ ರೈತ ಚಿದಾನಂದ್.

     ಕ್ವಿಂಟಾಲ್ ಕೊಬ್ಬರಿ ಧಾರಣೆ 18 ಸಾವಿರ ರೂ.ಗಳಿಂದ 14 ಸಾವಿರ ರೂ.ಗಳಿಗೆ ಕುಸಿದ ಸಂದರ್ಭದಲ್ಲಿ ಅಧಿಕಾರಿಗಳು ಹೇಳುತ್ತಿದ್ದ ಮಾತುಗಳೆಂದರೆ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಹಸಿಯಾಗಿದೆ, ಈ ಹಿನ್ನೆಲೆಯಲ್ಲಿ ಕೊಬ್ಬರಿ ದರ ಕುಸಿತ ಕಂಡಿದೆ. ಬೇಸಿಗೆ ದಿನಗಳಲ್ಲಿ ದರ ಹೆಚ್ಚಾಗಲಿದೆ ಎನ್ನುತ್ತಿದ್ದರು. ತಿಪಟೂರು ಎಪಿಎಂಸಿ ಅಧಿಕಾರಿಗಳು ಇವೇ ಮಾತುಗಳನ್ನು ಉಚ್ಚರಿಸುತ್ತಿದ್ದರು. ಆದರೆ ರೈತರ ನಿರೀಕ್ಷೆ ಸುಳ್ಳಾಗತೊಡಗಿದೆ.

     ಕನಿಷ್ಠ 15 ಸಾವಿರ ರೂಗಳಾದರೂ ಬೆಂಬಲ ಬೆಲೆ ಸಿಗಬೇಕು ಎಂಬುದು ರೈತರ ಆಗ್ರಹ. ಈ ಬಗ್ಗೆ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ರೈತರು ತಮ್ಮ ಪಾಡಿಗೆ ತಾವು ಇದ್ದಾರೆ. ಕೆಲವರು ಪ್ರತಿಭಟನೆಗೆ ಇಳಿದಿದ್ದಾರೆ. ಇಷ್ಟು ಪ್ರತಿಭಟನೆ ಸಾಲದು. ರಾಜ್ಯಾದ್ಯಂತ ರೈತರು ಒಗ್ಗಟ್ಟಾಗಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕು. ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು. ಕನಿಷ್ಠ 15 ಸಾವಿರ ರೂ.ಗಳ ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಯಾವುದೇ ಕಷ್ಟ ಇಲ್ಲ. ಆಗ ಖಾಸಗಿ ವರ್ತಕರೂ ಸಹ ಸರ್ಕಾರದ ಬೆಂಬಲ ಬೆಲೆ ಆಸುಪಾಸಿನಲ್ಲಿ ಖರೀದಿಸುತ್ತಾರೆ. ತಕ್ಷಣಕ್ಕೆ ಇದೊಂದೇ ದಾರಿ ಎನ್ನುತ್ತಾರೆ ಕೃಷಿಕ ಜಯದೇವಪ್ಪ.

     ನನ್ನ ಜೀವನಕ್ಕಿರುವ 70 ತೆಂಗಿನ ಮರಗಳು ಬಿಟ್ಟರೆ ನನಗೆ ಬೇರೇನೂ ಇಲ್ಲ. ಇದನ್ನೇ ನಂಬಿ ಜೀವನ ಮಾಡಬೇಕು. ಸರ್ಕಾರದ ಮಾಶಾಸನ ಬಂದು ನಾಲ್ಕು ತಿಂಗಳುಗಳೇ ಆಗಿವೆ. ಹೀಗಾದರೆ ಹೇಗೆ ಜೀವನ ಮಾಡುವುದು? ನನಗೀಗ 84 ವರ್ಷಗಳಾಗಿವೆ. ಈ ಇಳಿ ವಯಸ್ಸಿನಲ್ಲಿ ಮೊಮ್ಮಗಳನ್ನು ಸಾಕಿಕೊಂಡು ಅವಳ ವಿದ್ಯಾಭ್ಯಾಸವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಈ ರೀತಿ ಕೊಬ್ಬರಿ ಕುಸಿತ ಕಂಡರೆ ಏನು ಮಾಡಬೇಕು? ಜನಪ್ರತಿನಿಧಿಗಳು ರೈತರ ಸಹಾಯಕ್ಕೆ ಬರಬೇಕು. ಇಲ್ಲದೆ ಹೋದರೆ ತೆಂಗನ್ನೇ ನಂಬಿ ಬದುಕುವ ರೈತರ ಸ್ಥಿತಿ ಅಯೋಮಯವಾಗುತ್ತದೆ ಎನ್ನುತ್ತಾರೆ ತಿಪಟೂರು ತಾಲ್ಲೂಕು ಮರನಗೆರೆ ಶಿವಮ್ಮ ಅವರು.

    ರೈತರಿಗೆ ಆದಾಯ ತರುವ ಬೆಳೆಗಳಾದ ತೆಂಗು ಮತ್ತು ಅಡಿಕೆಯನ್ನೇ ಜಿಲ್ಲೆಯ ಸಾಕಷ್ಟು ಮಂದಿ ರೈತರು ಅವಲಂಬಿಸಿದ್ದಾರೆ. ಅಡಿಕೆಗೇನೋ ತಕ್ಕಮಟ್ಟಿಗೆ ಬೆಲೆ ಸಿಕ್ಕಿದೆ. ಆದರೆ ಕೊಬ್ಬರಿಯ ಬೆಲೆ ಪಾತಾಳಕ್ಕೆ ಕುಸಿದು ಬಿಟ್ಟಿದೆ. ಇದನ್ನೇ ನಂಬಿ ಜಿಲ್ಲೆಯ ರೈತರು ಜೀವನ ನಡೆಸುತ್ತಿದ್ದಾರೆ. ಬೆಲೆ ಇಲ್ಲದೆ ಮನೆಯ ಮುಂದೆ ಲಾಟುಗಟ್ಟಲೆ ತೆಂಗು ಬಿದ್ದಿದೆ.

   ಇದನ್ನು ಆರಕ್ಕೆ ಮೂರಂಗೆ ಕೇಳುತ್ತಾರೆ. ಹೀಗಾದರೆ ಹೇಗೆ? ರೈತರ ಕಷ್ಟ ತಿಳಿಯದ ಜನಪ್ರತಿನಿಧಿಗಳು ಚುನಾವಣೆ ಸಮೀಪಿಸಿದಾಗ ಮನೆ ಮುಂದೆ ಓಟಿಗಾಗಿ ಗೋಗರೆಯುತ್ತಾರೆ. ತೆಂಗಿನ ಬೆಲೆ ಕುಸಿತದ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ತಲೆಯೇ ಕೆಡಿಸಿಕೊಂಡಿಲ್ಲ. ಇವರಿಗೆ ಜನರ ಕಷ್ಟಕ್ಕಿಂತ ತಮ್ಮ ಅಧಿಕಾರವೇ ಹೆಚ್ಚಾಗಿದೆ. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯವ ರೈತನ ದುಡಿಮೆಗೆ ತಕ್ಕ ಪ್ರತಿಫಲ ಇಲ್ಲ ಎಂಬ ಆಕ್ರೋಶದ ಮಾತುಗಳನ್ನು ವ್ಯಕ್ತಪಡಿಸುತ್ತಾರೆ ಕೊರಟಗೆರೆ ತಾಲ್ಲೂಕಿನ ಪ್ರಗತಿಪರ ರೈತ ಕೋಡ್ಲಹಳ್ಳಿ ಕಟ್ಟೇಬಾರೆಯ ಕೆ.ಶ್ರೀಕಂಠಯ್ಯ ಅವರು.

    ಹಿಂದೆಲ್ಲ ಕೊಬ್ಬರಿ ಬೇರೆ ರಾಜ್ಯಗಳಿಗೆ ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಿಗೆ ಯಥೇಚ್ಛವಾಗಿ ರವಾನೆಯಾಗುತ್ತಿತ್ತು. ಬೇರೆ ರಾಷ್ಟçಗಳಿಗೂ ಕೊಬ್ಬರಿ ರಫ್ತಾಗುತ್ತಿತ್ತು. ಸರ್ಕಾರ ಮನಸ್ಸು ಮಾಡಿದರೆ ಹೆಚ್ಚು ರಫ್ತಾಗುವಂತೆ ನೋಡಿಕೊಳ್ಳಬಹುದು. ಹಿಂದೆಲ್ಲ ಈ ರೀತಿ ವ್ಯವಸ್ಥೆ ಇರಲಿಲ್ಲವೆ? ಕ್ವಿಂಟಾಲ್‌ಗೆ 19 ಸಾವಿರ ರೂ.ಗಳ ತನಕ ಮಾರಾಟವಾಗಿರಲಿಲ್ಲವೆ? ಈಗೇಕೆ ಈ ಸಮಸ್ಯೆ ಎನ್ನುವ ರೈತಾಪಿ ವರ್ಗ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳು, ಜನಪ್ರತಿನಿಧಿಗಳಿಂದ ನಾವೆಲ್ಲ ಮಣ್ಣು ತಿನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap