ಮುಂಬೈ:
ಮೀಸಲಾತಿ ವಿರೋಧಿ ಹೇಳಿಕೆ ನೀಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಸೀಳಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ ಮಂಗಳವಾರ ಹೇಳಿದ್ದಾರೆ. ಅವರ ಹೇಳಿಕೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ.ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಇಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಪ್ರತಿಕ್ರಿಯಿಸಿದ ಅನಿಲ್ ಬೋಂಡೆ, ನಾಲಿಗೆ ಕತ್ತರಿಸುವ ಮಾತುಗಳು ಸರಿಯಲ್ಲ. ಆದರೆ, ರಾಹುಲ್ ಗಾಂಧಿ ಮೀಸಲಾತಿ ವಿರುದ್ಧ ಹೇಳಿಕೆ ನೀಡಿರುವುದು ಅಪಾಯಕಾರಿ. ಹೀಗಾಗಿ ವಿದೇಶದಲ್ಲಿ ಅಸಂಬದ್ಧವಾಗಿ ಮಾತನಾಡುವವರ ನಾಲಿಗೆ ಕತ್ತರಿಸುವ ಬದಲಿಗೆ ಅದನ್ನು ಸೀಳಬೇಕು. ರಾಹುಲ್ ಗಾಂಧಿ ಆಗಲೀ ಅಥವಾ ದ್ಯಾನೇಶ್ ಮಹಾರಾವ್ ಅಥವಾ ಶ್ಯಾಮ್ ಮಾನವ್ ಯಾರೇ ಆಗಲಿ ಬಹುಜನರ ಭಾವನೆಗಳಿಗೆ ಧಕ್ಕೆ ತರುವವರ ನಾಲಿಗೆ ಸೀಳುವ ಅಗತ್ಯವಿದೆ ಎಂದರು.
ಲೇಖಕ ಮಹಾರಾವ್ ಇತ್ತೀಟಿಗೆ ಹಿಂದೂ ನಂಬಿಕೆ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪವಿದೆ. ಮಾನವ್ ಮೂಢನಂಬಿಕೆ ವಿರೋಧಿಯಾಗಿದ್ದಾರೆ. ಬೋಂಡೆ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಪ್ರತಿಪಕ್ಷಗಳು ಕಿಡಿಕಾರಿವೆ.
ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗಳನ್ನು ಶಿವಸೇನಾ (ಯುಬಿಟಿ)ಬಣದ ನಾಯಕ ಸಂಜಯ್ ರಾವತ್ ಖಂಡಿಸಿದ್ದಾರೆ. ರಾಹುಲ್ ಗಾಂಧಿ ಅವರ ವಿರುದ್ಧ ಪಿತೂರಿ ನಡೆಯುತ್ತಿದ್ದು, ಅವರಿಗೆ ಜೀವ ಬೆದರಿಕೆಯಿದೆ. ರಾಹುಲ್ ವಿರುದ್ಧದ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.