ಅಕ್ರಮ ಕಲ್ಲು ಗಣಿಗಾರಿಕೆಗೆ ವ್ಯಾಪಕ ವಿರೋಧ

ತುರುವೇಕೆರೆ:

 ಪಾದಯಾತ್ರೆ ಕೈಗೊಂಡು ಪ್ರತಿಭಟಿಸಿದ ಗ್ರಾಮಸ್ಥರು-ರೈತರು

ತಾಲ್ಲೂಕಿನ ಕೋಳಘಟ್ಟ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕೋಳಘಟ್ಟ ಗ್ರಾಮದ ಗ್ರಾಮಸ್ಥರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಹಾಗೂ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

ತಹಸೀಲ್ದಾರ್‍ಗೆ ಪ್ರಶ್ನೆ :

ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಲ್ಲು ಒದಗಿಸಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎನ್ನುವುದಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೆ ಕಲ್ಲು ಗಣಿಗಾರಿಕೆ ಮಾಡಿಕೊಂಡು ಕಲ್ಲು ಬಳಸಿಕೊಳ್ಳಬೇಕು, ಅದನ್ನು ಬಿಟ್ಟು ವಿಶ್ವನಾಥ ಎಂಟರ್‍ಪ್ರೈಸಸ್‍ನವರಿಗೆ ಕಲ್ಲುಗಣಿಗಾರಿಕೆ ಮಾಡಲು ಸರ್ಕಾರ ಆದೇಶ ನೀಡಿದೆ.

ಇವರಿಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಏನು ಸಂಬಂಧ? ಇದರ ಆದೇಶ ಪ್ರತಿ ಇದ್ದರೆ ನೀಡಿ, ಇದರ ಹಿನ್ನಲೆ ಏನು? ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು.

ಜನಪ್ರತಿನಿಧಿ-ಅಧಿಕಾರಿಗಳ ಕೈವಾಡ :

ತಾಲ್ಲೂಕು ಆಡಳಿತವು ಕುಸಿದಿದೆ, ರೈತರಿಗೆ ನ್ಯಾಯ ಸಿಗುತ್ತಿಲ್ಲ, ಕಲ್ಲು ಗಣಿಗಾರಿಕೆ ಮಾಡುವ ಮುನ್ನ ಸ್ಥಳಿಯ ರೈತರಿಗೆ ಮಾಹಿತಿ ನೀಡದೆ ರೈತರನ್ನು ಮನವೊಲಿಸದೆ ರೈತರ ವಿರೋಧ ಇದ್ದರೂ ಸಹ ಕಲ್ಲು ಗಣಿಗಾರಿಕೆ ಮಾಡುತ್ತಿರುವುದರಲ್ಲಿ ರಾಜಕೀಯ ಮುಖಂಡರ ಹಾಗೂ ಅಧಿಕಾರಿಗಳ ಕೈ ವಾಡ ಇದೆ.

ಕೋಳಘಟ್ಟ ಗ್ರಾಮ ಮಾತ್ರವಲ್ಲದೆ ಇಡೀ ತಾಲ್ಲೂಕಿನ ಅಳಿವು ಉಳುವಿನ ಪ್ರಶ್ನೆಯಾಗಿದೆ ಕೂಡಲೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಕಲ್ಲು ಗಣಿಗಾರಿಕೆಯನ್ನು ರದ್ದು ಗೊಳಿಸಬೇಕು ಎಂದು ಆಗ್ರಹಿಸಿದರು.

ಅಪಾರ ಜನ ಬೆಂಬಲ :

ಪ್ರತಿಭಟನೆಯಲ್ಲಿ ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ತಾಲ್ಲೂಕು ಅಧ್ಯಕ್ಷ ತಾಳಕೆರೆ ನಾಗೇಂದ್ರ, ಜಿಲ್ಲಾ ಕಾರ್ಯದರ್ಶಿ ಹಳೇಸಂಪಿಗೆ ಕೀರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ರೇಣಕಪ್ಪ, ಸಿಐಟಿಯು ಸತೀಶ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಮುಖಂಡರಾದ ಶಂಕರಲಿಂಗಪ್ಪ,

ಮಂಜಣ್ಣ, ಈಶಣ್ಣ, ಕುಮಾರಣ್ಣ, ರಾಜೀವ್, ಯೋಗೀಶ್, ಜಯಕುಮಾರ್, ಕುಮಾರ್, ದುಂಡಾ ಶಿವಕುಮಾರ್ ಹಾಗೂ ಕೋಳಘಟ್ಟ, ಕೋಳಘಟ್ಟ ಕಾವಲ್, ನೆಮ್ಮದಿ ಗ್ರಾಮ, ಶಾಂತಿ ಗ್ರಾಮ, ಪಿ.ಕಲ್ಲಳ್ಳಿ, ಮುದ್ಲಾಪುರ, ಸೀಗೇಹಳ್ಳಿ, ಸೋಮಲಾಪುರ, ಅರಳಗುಪ್ಪೆ, ದೇವರಹಟ್ಟಿ, ಅಜ್ಜೆನಹಳ್ಳಿ, ನೀರಗುಂದ, ಪಾಳ್ಯ, ಹರಿದಾಸನಹಳ್ಳಿ, ಆನೆಕೆರೆ, ಪಾಳ್ಯ, ಮಲ್ಲಾಘಟ್ಟ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ತಾಲ್ಲೂಕಿನ ಕೋಳಘಟ್ಟ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕೋಳಘಟ್ಟ ಗ್ರಾಮಸ್ಥರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಹಾಗೂ ಬೃಹತ್ ಪ್ರತಿಭಟನೆ ನಡೆಸಿದರು.

ಈ ಹಿಂದೆ ಮರಳು ಗಣಿಗಾರಿಕೆ ನಡೆಯುತಿತ್ತು, ಆದರೆ ರಾಜಕಾರಣಿಗಳು ಸೇರಿ ಕಲ್ಲನ್ನು ಪುಡಿ ಮಾಡಿ ಪಟ್ಟಣಕ್ಕೆ ಸಾಗಾಟ ಮಾಡುತ್ತಾ, ಹಣ ಮಾಡುವ ದಂಧೆಯನ್ನು ಮಾಡಿಕೊಂಡಿದ್ದಾರೆ. ನಮ್ಮ ಪ್ರಕೃತಿಯನ್ನು ಹಾಳು ಮಾಡುತ್ತಿರುವ ಇವರು ಪ್ರಕೃತಿಯನ್ನು ಸೃಷ್ಟಿ ಮಾಡಲು ಸಾಧ್ಯವೇ?

-ಆನಂದ್ ಪಟೇಲ್, ರೈತ ಸಂಘದ ಜಿಲ್ಲಾಧ್ಯಕ್ಷ

ರೈತರಿಂದ ಪಾದಯಾತ್ರೆ :

ತಾಲ್ಲೂಕಿನ ಕೋಳಘಟ್ಟ ಗ್ರಾಮದಿಂದ ನೂರಾರು ರೈತರು ಪಾದಯಾತ್ರೆ ಮೂಲಕ ಹೊರಟು ಮಾವಿನಹಳ್ಳಿ, ಗಂಗನಹಳ್ಳಿ, ಲೋಕಮ್ಮನಹಳ್ಳಿ ಮಾರ್ಗವಾಗಿ ತಾಲ್ಲೂಕು ಕಚೇರಿ ತಲುಪಿದರು. ನಂತರ ಕಚೇರಿ ಮುಂಭಾಗ ಶಾಮಿಯಾನ ಹಾಕಿ ಆಹೋ ರಾತ್ರಿ ಪ್ರತಿಭಟನೆ ಕೈಗೊಂಡರು. ಪ್ರತಿಭಟನೆ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap