ಚಿಕ್ಕಮಗಳೂರು:
ಐದು ತಿಂಗಳ ಹಿಂದೆ ಮದುವೆಯಾಗಿದ್ದ ಪತಿಯೇ ಪತ್ನಿಯನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದೆ. ಪತಿ ನವೀನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಐದು ತಿಂಗಳ ಹಿಂದಷ್ಟೇ ಇವರಿಬ್ಬರ ಮದುವೆಯಾಗಿತ್ತು. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಪತಿ ಜೊತೆ ಜಗಳ ಮಾಡಿ ನೇತ್ರಾ ತವರು ಸೇರಿದ್ದಳು. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪತ್ನಿಯನ್ನು ಕೊಂದು ಶವವನ್ನು ಮಂಚದೊಳಗಿಟ್ಟು ಬೆಡ್ ಮುಚ್ಚಿ ಪತಿ ಪರಾರಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿತ್ತು. ಸಾಕ್ಷಿ ಕಂಬಾರ ಕೊಲೆಯಾದ ಪತ್ನಿ. ಆಕಾಶ್ ಪರಾರಿಯಾಗಿರುವ ಪತಿ. ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಲ್ಕು ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿ ಕಂಬಾರ ಮದುವೆ ಆಗಿತ್ತು. ಮೂರು ದಿನದ ಹಿಂದೆ ಸಾಕ್ಷಿ ಕಂಬಾರಳನ್ನು ಕೊಂದು ಮಂಚದೊಳಗೆ ಶವ ಬಚ್ಚಿಟ್ಟು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಆಕಾಶ್ ಪರಾರಿ ಆಗಿದ್ದಾನೆ. ಇತ್ತ ಊರಿಗೆ ಹೋಗಿದ್ದ ಅತ್ತೆ ಮನೆಗೆ ಹಿಂದಿರುಗಿದಾಗ ಹತ್ಯೆ ಬೆಳಕಿಗೆ ಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಮತ್ತು ಗೋಕಾಕ್ ಡಿವೈಎಸ್ಪಿ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.
