ಮುಗಿದ ಗಜಗಣತಿ : ಕಾಡಾನೆಗಳ ಸಂಖ್ಯೆ ಹೆಚ್ಚಳ ಸಾಧ್ಯತೆ…!

ಮೈಸೂರು

      ಈಗಾಗಲೇ ಸುರಿದ ಮಳೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹಸಿರಾಗಿದೆ. ಬೇಸಿಗೆಯ ಬಿರು ಬಿಸಿಲಿಗೆ ಸಿಲುಕಿ ಬೋಳಾಗಿದ್ದ ಅರಣ್ಯ ಇದೀಗ ಹಸಿರಾಗಿದ್ದು, ಅರಣ್ಯಗಳ ನಡುವೆ ವನ್ಯ ಪ್ರಾಣಿಗಳು ಸಂಭ್ರಮಿಸುತ್ತಿವೆ. ಹೀಗಿರುವಾಗಲೇ ಮೇ 16ರಿಂದ 18ರವರೆಗೆ ಆನೆಗಣತಿಯೂ ಕೂಡ ನಡೆದಿದೆ.

     ಕಳೆದ ಐದು ವರ್ಷಗಳ ನಂತರ ಆನೆ ಗಣತಿಯನ್ನು ನಡೆಸಲಾಗಿದೆ. ಈಗಾಗಲೇ ನಾಗರಹೊಳೆ ಅರಣ್ಯದಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯಿದ್ದು, ಆಗಾಗ್ಗೆ ಕಾಡಾನೆಗಳು ಅರಣ್ಯದಿಂದ ಹೊರಬಂದು ದಾಂಧಲೆ ನಡೆಸುವುದು ಮಾಮೂಲಿಯಾಗಿದೆ. 2017ರಲ್ಲಿ ನಡೆದ ಗಣತಿಯಲ್ಲಿ ರಾಜ್ಯದಲ್ಲಿ 6,049 ಕಾಡಾನೆಗಳಿರುವುದು ದಾಖಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯಿದೆ.

     ಪ್ರತಿ ಐದು ವರ್ಷಕ್ಕೊಮ್ಮೆ ನಾಗರಹೊಳೆ ಅರಣ್ಯ ಸೇರಿ ಬಂಡೀಪುರ, ಬಿ.ಆರ್.ಹಿಲ್ಸ್ ಸೇರಿ ಪ್ರತಿ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಗಣತಿ ನಡೆಸುತ್ತಾ ಬರಲಾಗುತ್ತಿದೆ. ನಾಗರಹೊಳೆಯು 648 ಚದರ ಕಿಲೋ ಮೀಟರ್‌ ಹೊಂದಿದ್ದು, ಅರಣ್ಯ ವ್ಯಾಪ್ತಿಯಲ್ಲಿರುವ ಆನೆಗಳ ಗಣತಿಯನ್ನು ಕಳೆದ ಮೂರು ದಿನಗಳ ಕಾಲ ನಡೆಸಲಾಗಿತ್ತು. ಆನೆ ಗಣತಿಯನ್ನು 500 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹುಲಿ ಯೋಜನೆಗೆ ಸೇರಿದ ಇಲಾಖೆಯ 300 ಸಿಬ್ಬಂದಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

     ಇನ್ನು ನಾಗರಹೊಳೆಯಲ್ಲಿ ನಡೆದ ಆನೆಗಣತಿ ಕುರಿತಂತೆ ಮಾಹಿತಿ ನೀಡಿದ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಅವರು, ನಾಗರಹೊಳೆಯ 91 ಗಸ್ತುಗಳಲ್ಲಿ ನಡೆದ ಗಣತಿ ಕಾರ್ಯದಲ್ಲಿ ಹುಲಿ ಯೋಜನೆಗೆ ಸೇರಿದ ಇಲಾಖೆಯ 300 ಸಿಬ್ಬಂದಿ ಭಾಗವಹಿಸಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ಈ ಬಾರಿ ಸ್ವಯಂ ಸೇವಕರನ್ನು ನಿಯೋಜಿಸಿಲ್ಲ ಎಂದು ತಿಳಿಸಿದರು.

     ಆನೆ ಗಣತಿ ಕಾರ್ಯವನ್ನು ಮೂರು ಹಂತದಲ್ಲಿ ನಡೆಸಿದ್ದು, ಮೊದಲ ದಿನ ಬ್ಲಾಕ್ ಕೌಂಟ್ ಮೂಲಕ ನೇರ ಗಣತಿ. ಎರಡನೇ ದಿನ ಪರೋಕ್ಷ ಗಣತಿ (ಲದ್ದಿ ಮಾದರಿ ಎಣಿಕೆ), ಮೂರನೇ ದಿನ ಕೆರೆ ಕಟ್ಟೆ ಬಳಸಿ ಎಣಿಕೆ ನಡೆಸಲಾಗಿದ್ದು, ಎಣಿಕೆ ಕಾರ್ಯಗಳಿಗೆ ನಿಗದಿತ ವ್ಯಾಪ್ತಿ ಗುರುತಿಸಲಾಗಿದೆ.

    ನಾಗರಹೊಳೆ ವ್ಯಾಪ್ತಿಯಲ್ಲಿ ಶೇಕಡಾ 50ರಷ್ಟು ಭೂ ಪ್ರದೇಶ ಅಥವಾ 5 ಚ.ಕಿ.ಮೀ ಪ್ರದೇಶದಲ್ಲಿ ಕನಿಷ್ಠ 15 ಕಿ.ಮೀ. ಕಾಲ್ನಡಿಗೆಯಲ್ಲಿ ಗಣತಿ ಸಿಬ್ಬಂದಿ ಸುತ್ತಾಡಿದ್ದಾರೆ. ಈ ಮೂಲಕ ಅರಣ್ಯದಲ್ಲಿ ಕಾಣಿಸುವ ಆನೆಯ ಗುರುತುಗಳನ್ನು ನಿಗದಿತ ದಾಖಲೆ ಪ್ರಕಾರ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

     ಗಣತಿ ಸಿಬ್ಬಂದಿ ಎರಡನೇ ದಿನ ಕನಿಷ್ಠ 2 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಓಡಾಡಿ ಪರೋಕ್ಷವಾಗಿ ಆನೆ ಲದ್ದಿ ಸಂಗ್ರಹಿಸಿ ವೈಜ್ಞಾನಿಕವಾಗಿ ದಾಖಲಿಸುವ ಕ್ರಮ ಅನುಸರಿಸಿದ್ದಾರೆ. ಮೂರನೇ ದಿನ ಅರಣ್ಯದೊಳಗಿನ ಕೆರೆ-ಕಟ್ಟೆ, ನೀರಿನ ಹೊಂಡಗಳ ಬಳಿ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ಮೊಕ್ಕಾಂ ಹೂಡಿ ಸ್ಥಳಕ್ಕೆ ಬಂದ ಆನೆಗಳ ಗಣತಿ ನಡೆಸಿದ್ದಾರೆ.

     ರಾಜ್ಯದಲ್ಲಿ ದಾಂಡೇಲಿ ಮತ್ತು ಮೈಸೂರು ವಿಭಾಗದಲ್ಲಿ ಅರಣ್ಯ ಪ್ರದೇಶವಿದೆ. ಮೈಸೂರು ವಿಭಾಗದ ವ್ಯಾಪ್ತಿಯಲ್ಲಿರುವ ನಾಗರಹೊಳೆ, ಬಿ.ಆರ್.ಹಿಲ್ಸ್, ಬಂಡೀಪುರ ಸೇರಿ 10 ಸಂರಕ್ಷಿತ ಅರಣ್ಯ ಪ್ರದೇಶಗಳು, ಕೇರಳದ ವೈನಾಡು ಅರಣ್ಯ ಆನೆಗಳಿಗೆ ಸುರಕ್ಷಿತ ತಾಣಗಳಾಗಿವೆ. ಇವು ಆಹಾರ ಭದ್ರತೆಯನ್ನೂ ಒದಗಿಸುವ ಹರಿಧ್ವರ್ಣದ ಕಾಡುಗಳಾಗಿವೆ.

     ಇನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮೈಸೂರು ಮತ್ತು ಕೊಡಗಿಗೆ ವರದಾನವಾಗಿದ್ದು, ಸುಮಾರು 643 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ.

     ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರು ಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ.

     ಈಗಂತೂ ಹಸಿರ ವನಸಿರಿ ಕಣ್ಮನ ತಣಿಸುತ್ತಿದ್ದರೆ, ಅದರ ನಡುವೆ ಹಿಂಡು ಹಿಂಡಾಗಿ ಕಾಣುವ ಅಚ್ಚರಿಯ ನೋಟ ಬೀರುವ ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆ ಹಾಕುವ ಹುಲಿ, ಆಗೊಮ್ಮೆ ಈಗೊಮ್ಮೆ ಕಾಣುವ ಕರಿಚಿರತೆ ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸುವಂತೆ ಮಾಡಿದೆ. ಇದರ ನಡುವೆ ಕಾಡಾನೆಗಳ ಗಣತಿ ನಡೆದಿದ್ದು, ನಾಗರಹೊಳೆಯಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿದೆಯಾ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap