ತಮಿಳುನಾಡು : ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜಿನಾಮೆ ಸಾಧ್ಯತೆ…..

ಚೆನ್ನೈ:

    ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಸಾಧ್ಯತೆ ಚಿಗುರೊಡೆದಿದೆ. ಆದರೆ ಎಐಎಡಿಎಂಕೆ ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೋಡಲು ಇಷ್ಟಪಡದಿರುವುದು, ಅವರ ಕುರ್ಚಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ ಪಕ್ಷದ ಅಸಮಾಧಾನಕ್ಕೆ ಪ್ರಮುಖ ಕಾರಣ. ಅಲ್ಲದೇ ಜಾತಿ ಸಮೀಕರಣಗಳ ಕಾರಣದಿಂದಲೂ ಅಣ್ಣಾಮಲೈ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುವ ಸಾಧ್ಯತೆಗಳಿವೆ.

    ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೈಕಮಾಂಡ್‌ಗೆ ವರದಿಯನ್ನು ಸಲ್ಲಿಸಿದ್ದೇನೆ. ರಾಜ್ಯದ ಪರಿಸ್ಥಿತಿ ಮತ್ತು ಮುಂದಿನ ಕಾರ್ಯತಂತ್ರದ ಬಗ್ಗೆ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷದ ತಂತ್ರವನ್ನು ಅನುಸರಿಸುವಂತೆ ಅಮಿತ್‌ ಶಾ ಅವರು ಅಣ್ಣಾಮಲೈ ಅವರಿಗೆ ಸೂಚನೆ ನೀಡಿದ್ದು, ಇದರ ಅನುಸಾರವಾಗಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಆದರೆ ಅಣ್ಣಾಮಲೈ ಅವರ ಸೇವೆಯನ್ನು ಕಳೆದುಕೊಳ್ಳಲು ಇಷ್ಟಪಡದ ಬಿಜೆಪಿ, ಅವರಿಗೆ ರಾಷ್ಟ್ರೀಯ ಜವಾಬ್ದಾರಿ ಅಥವಾ ಅನ್ಯ ರಾಜ್ಯಗಳ ಉಸ್ತುವಾರಿ ಜವಾಬ್ದಾರಿಯನ್ನು ನೀಡಲು ತೀರ್ಮಾನ ಮಾಡಿದಂತಿದೆ. ಅಣ್ಣಾಮಲೈ ಅವರ ಬದಲಿಗೆ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮೂಲಕ, ಜಾತಿ ಸಮೀಕರಣವನ್ನು ಬಲಗೊಳಿಸುವ ಇರಾದೆ ಬಿಜೆಪಿಯದ್ದಾಗಿದೆ.

Recent Articles

spot_img

Related Stories

Share via
Copy link