ಇಂದಾದರೂ ಸಿಗುತ್ತಾ ದಾಸನಿಗೆ ಮುಕ್ತಿ …..!

ಬೆಂಗಳೂರು 

   ಸೆಷನ್ಸ್ ಕೋರ್ಟ್ ಸಿಸಿಹೆಚ್ 57ರಲ್ಲಿ ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಇಂದು (ಸೆಪ್ಟೆಂಬರ್ 30) ನಡೆಯಲಿದೆ. ದರ್ಶನ್ ಪರ ವಕೀಲ ಸುನೀಲ್​ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ಹಲವು ವಾದಗಳನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ. ಇವುಗಳನ್ನು ಕೋರ್ಟ್ ಪರಿಗಣಿಸಿದರೆ ಅವರಿಗೆ ಜಾಮೀನು ಸಿಗೋದು ಸುಲಭವಾಗಲಿದೆ.

   ‘ದರ್ಶನ್ ಹೇಳಿಕೆ ಆಧರಿಸಿ ಸಾಕ್ಷ್ಯ ಸಂಗ್ರಹಿಸಿದ್ದಾಗಿ ಹೇಳಲಾಗಿದೆ. ಆದರೆ ಸಾಕ್ಷ್ಯ ಗಮನಿಸಿದರೆ ಪ್ರಾಸಿಕ್ಯೂಷನ್ ಆರೋಪಗಳು ಸುಳ್ಳು ಎಂದು ಅನಿಸುತ್ತದೆ. ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಕೆಲಸವಾಗಿರುವುದು ಕಂಡುಬರುತ್ತಿದೆ’ ಎಂಬುದು ದರ್ಶನ್ ಪರ ವಕೀಲರ ವಾದ. ‘ಇತರೆ ಆರೋಪಿಗಳೊಂದಿಗೆ ದರ್ಶನ್ ದೂರವಾಣಿ ಕರೆ ವಿವರ ಸಂಗ್ರಹ ಮಾಡಿದ್ದಾರೆ. ರೇಣುಕಾಸ್ವಾಮಿ ಮೇಲಿನ ಹಲ್ಲೆ ದರ್ಶನ್​ಗೆ ತಿಳಿದಿತ್ತೆಂಬಂತೆ ಬಿಂಬಿಸಲಾಗಿದೆ. ದರ್ಶನ್ ಕರೆ ಮಾಡಿರುವುದು ತಮ್ಮ ಸ್ನೇಹಿತರು, ಉದ್ಯೋಗಿಗಳು ಮತ್ತಿತರರಿಗೆ. ಎಂದಿನಂತೆ ದರ್ಶನ್ ಅವರೊಂದಿಗೆ ಸಹಜವಾಗೇ ಮಾತನಾಡಿದ್ದಾರೆ’ ಎಂದು ದರ್ಶನ್ ಪರ ವಕೀಲರು ಹೇಳುತ್ತಿದ್ದಾರೆ.

   ‘ಕೃತ್ಯದ ನಾಲ್ಕು ದಿನದ ಬಳಿಕ ಪೋಸ್ಟ್​ಮಾರ್ಟಮ್ ಮಾಡಲಾಗಿದೆ. ನಾಲ್ಕು ದಿನದ ಬಳಿಕವೇ ಶವದ ಪಂಚನಾಮೆ ನಡೆದಿದೆ. ಈ ವಿಳಂಬಕ್ಕೆ ತನಿಖಾಧಿಕಾರಿ ಯಾವುದೇ ವಿವರಣೆ ನೀಡಿಲ್ಲ. ರೇಣುಕಾ ಸ್ವಾಮಿ ತಲೆಯ ಮೇಲೆ 2.5X1 ಸೆಂಟಿ ಮೀಟರ್​ನ ಒಂದು ಆಳವಾದ ಗಾಯವಿದೆ. ಮೃತದೇಹದ ಕೆಲವೆಡೆ ಏಟುಗಳ ಗುರುತುಗಳಿವೆ. ಶವಪರೀಕ್ಷೆ ನಡೆಸಿದ ವೈದ್ಯರ ವರದಿಯಲ್ಲಿ ಸ್ಪಷ್ಟತೆಯಿಲ್ಲ. ಸಾವಿಗೆ ಕಾರಣ ಹಾಗೂ ಸಾವಿನ ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ದರ್ಶನ್ ಪರ ವಕೀಲರು ಹೇಳುತ್ತಿದ್ದಾರೆ. ಇದು ವಿಚಾರಣೆಯಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

   ‘ಸಹ ಆರೋಪಿಗಳ ಮೊಬೈಲ್​ ಸಂದೇಶಕ್ಕೂ ದರ್ಶನ್​ಗೂ ಸಂಬಂಧವಿಲ್ಲ. ಕೃತ್ಯಕ್ಕೂ ಮೊಬೈಲ್ ಸಂದೇಶಗಳಿಗೂ ಯಾವುದೇ ಸಂಬಂಧವಿಲ್ಲ. ಸಿಸಿಟಿವಿ ದೃಶ್ಯಾವಳಿ ಸತ್ಯವೆಂದು ನಂಬಿದರೂ ದರ್ಶನ್ ಪಾತ್ರ ಸಾಬೀತಾಗುತ್ತಿಲ್ಲ. ಸಿಸಿಟಿವಿಯಲ್ಲಿ ದರ್ಶನ್ ಹಾಜರಿ, ಕೃತ್ಯದಲ್ಲಿ ಭಾಗಿ ಬಗ್ಗೆ ಕಂಡುಬಂದಿಲ್ಲ. ಸಿಆರ್‌ಪಿಸಿ 164 ಹೇಳಿಕೆಗೂ ವೈದ್ಯಕೀಯ ವರದಿಗೂ ವ್ಯತ್ಯಾಸಗಳಿವೆ. ವೈಜ್ಞಾನಿಕ ಸಾಕ್ಷಿಗೂ, ಪ್ರತ್ಯಕ್ಷದರ್ಶಿಗಳ ಹೇಳಿಕೆಗೂ ಸಾಮ್ಯತೆ ಇಲ್ಲ. ಸಾಕ್ಷ್ಯಗಳಿಂದಲೇ ಕೃತ್ಯದಲ್ಲಿ ದರ್ಶನ್ ಪಾತ್ರವಿಲ್ಲದ್ದು ಕಂಡುಬರುತ್ತಿದೆ. ದರ್ಶನ್ ಮುಗ್ಧನಾಗಿದ್ದರೂ ಈ ಕೇಸ್​ನಲ್ಲಿ ಎಳೆತರಲಾಗಿದೆ’ ಎಂಬುದು ದರ್ಶನ್ ಪರ ವಕೀಲರ ವಾದ.

  ‘ಹೀಗೆ ಮಾಡಿದ್ದೇಕೆಂಬ ಬಗ್ಗೆ ತನಿಖಾಧಿಕಾರಿಯೇ ಕಾರಣ ಕೊಡಬೇಕಿದೆ. ದರ್ಶನ್ ಸ್ಥಾನಮಾನ ಗಮನಿಸಿದರೆ ನ್ಯಾಯದಾನದಿಂದ ತಪ್ಪಿಸಿಕೊಳ್ಳುವ ವ್ಯಕ್ತಿಯಲ್ಲ. ಹೀಗಾಗಿ ಜಾಮೀನು ನೀಡಬೇಕು’ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap