ನಾಳೆಯಿಂದ ಏಕದಿನ ಸರಣಿ; ಟೆಸ್ಟ್‌ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಭಾರತ?

ರಾಂಚಿ: 

    ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 2-0 ವೈಟ್‌ವಾಶ್ ಮುಖಭಂಗ ಕಂಡಿರುವ ಭಾರತ ತಂಡ ಇದೀಗ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ(ನ.30) ರಾಂಚಿಯಲ್ಲಿ ನಡೆಯಲಿದೆ. ಟೆಸ್ಟ್‌ ಸರಣಿ ಸೋಲಿಗೆ ಭಾರತ ಏಕದಿನದಲ್ಲಿ ಸೇಡು ತೀರಿಸಿಕೊಂಡೀತೇ ಎಂಬುದು ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ.

   ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಈ ಸರಣಿಯ ಪ್ರಮುಖ ಆಕರ್ಷಣೆ. ಹೌದು ಉಭಯ ಆಟಗಾರರು ಸರಿ ಸುಮಾರು 8 ತಿಂಗಳ ಬಳಿಕ ತವರಿನಲ್ಲಿ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಇದೇ ಕಾರಣಕ್ಕೆ ಮೊದಲ ಪಂದ್ಯದ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಈ ಪಂದ್ಯದಲ್ಲಿ ಉಭಯ ಆಟಗಾರರು ಕಣಕ್ಕಿಳಿಯುತ್ತಿದ್ದಂತೆ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಪಂದ್ಯಗಳನ್ನು ಜತೆಯಾಗಿ ಆಡಿದ ಸಾಧನೆಯೂ ಮಾಡಲಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ ಮಹತ್ವದ ಮೈಲುಗಲ್ಲೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ದ್ವಿಪಕ್ಷೀಯ ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಕ್ರಿಕೆಟಿಗನಾಗಲು 64 ರನ್‌ಗಳ ಅವಶ್ಯಕತೆಯಿದೆ. ಸದ್ಯ ಅವರು ದ್ವಿಪಕ್ಷೀಯ ಏಕದಿನ ಪಂದ್ಯಗಳಲ್ಲಿ 9936* ರನ್ ಗಳಿಸಿದ್ದಾರೆ.

    ತವರಿನ ಟೆಸ್ಟ್‌ ಸರಣಿ ಸೋಲಿನ ಬೆನ್ನಲ್ಲೇ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಟೀಕೆಗಳು ಕೇಳಿ ಬರುತ್ತಿರುವಾಗಲೇ ಈ ಸರಣಿ ಅವರ ಪಾಲಿಗೆ ಅಗ್ನಿಪರೀಕ್ಷೆ ಎಂದರೂ ತಪ್ಪಾಗಲಾರದು. ಹೌದು, ಗಂಭೀರ್‌ ಭಾರತ ತಂಡದ ಕೋಚ್‌ ಆದ ಬಳಿಕ ಭಾರತ ಇದುವರೆಗೂ ಒಂದೂ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿಲ್ಲ. ಗಂಭೀರ್‌ ಮಾರ್ಗದರ್ಶನದಲ್ಲಿ ಶ್ರೀಲಂಕಾ(0-2) ಮತ್ತು ಆಸ್ಟ್ರೇಲಿಯಾ(1-2 ಸರಣಿಯಲ್ಲಿ ಸೋಲು ಕಂಡಿತ್ತು. ಒಂದೊಮ್ಮೆ ಈ ಸರಣಿಯೂ ಸೋತರೆ ಅವರ ತಲೆದಂಡ ಖಚಿತ ಎನ್ನಲಡ್ಡಿಯಿಲ್ಲ.

    ಕನ್ನಡಿಗ ಕೆ.ಎಲ್‌ ರಾಹುಲ್‌ ನಾಯಕತ್ವದ ಜತೆಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ಹೀಗಾಗಿ ರಿಷಭ್‌ ಪಂತ್‌ 11ರ ಬಳಗದಲ್ಲಿ ತಜ್ಞ ಬ್ಯಾಟರ್‌ ಆಗಿ ಮಾತ್ರ ಸ್ಥಾನ ನಿರೀಕ್ಷಿಸಬಹುದಾಗಿದೆ. ಮೂಲಗಳ ಪ್ರಕಾರ, ಪಂತ್‌ 4ನೇ ಕ್ರಮಾಂಕದ ಬ್ಯಾಟರ್‌ ಆಗಿ ಆಡಲು ತಿಲಕ್‌ ವರ್ಮ ಜತೆ ಪೈಪೋಟಿಯಲ್ಲಿದ್ದಾರೆ. ಪಂತ್‌ 2024ರ ಆಗಸ್ಟ್‌ನಲ್ಲಿ ಭಾರತ ಪರ ಕೊನೆಯದ್ದಾಗಿ ಏಕದಿನ ಪಂದ್ಯ ಆಡಿದ್ದರು. ಗಿಲ್‌ ಗೈರಿನಲ್ಲಿ ಯಶಸ್ವಿ ಜೈಸ್ವಾಲ್‌, ರೋಹಿತ್‌ ಜತೆ ಇನಿಂಗ್ಸ್‌ ಆರಂಭಿಸುವುದು ಖಚಿತ. ಹೀಗಾಗಿ ಋತುರಾಜ್‌ ಗಾಯಕ್ವಾಡ್‌ಗೆ 11ರ ಬಳಗದಲ್ಲಿ ಸ್ಥಾನ ನಿರೀಕ್ಷೆ ಇಲ್ಲ.

    ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಮತ್ತು ಅಕ್ಷರ್‌ ಪಟೇಲ್‌ಗೆ ವಿಶ್ರಾಂತಿ ನೀಡಿರುವ ಕಾರಣ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ತಲೆನೋವುಗಳಿಲ್ಲ. ಅರ್ಶ್‌ದೀಪ್‌ ಸಿಂಗ್‌ ಮತ್ತು ಹರ್ಷಿತ್‌ ರಾಣಾ ಸ್ಥಾನ ಪಡೆಯಲಿದ್ದಾರೆ. ಸ್ಪಿನ್ನರ್‌ ಆಗಿ ರವೀಂದ್ರ ಜಡೇಜಾ ಮತ್ತು ಕುಲ್‌ದೀಪ್‌ ಕಾಣಿಸಿಕೊಳ್ಳಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಗೈರಿನಲ್ಲಿ ಆಲ್‌ರೌಂಡರ್‌ ಸ್ಥಾನವನ್ನು ನಿತೀಶ್‌ ಕುಮಾರ್‌ ರೆಡ್ಡಿ ತುಂಬಲಿದ್ದಾರೆ.

   ಟೆಸ್ಟ್‌ ಸರಣಿ ಗೆದ್ದಿರುವ ಜೋಶ್‌ನಲ್ಲಿರುವ ಟೆಂಬ ಬವುಮಾ ಸಾರಥ್ಯದ ದಕ್ಷಿಣ ಆಫ್ರಿಕಾ ಅನುಭವಿ ಮತ್ತು ಯುವ ಆಟಗಾರರ ಸಮಿಶ್ರಣದೊಂದಿಗೆ ಬಲಿಷ್ಠವಾಗಿದೆ. ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವೈವಿಧ್ಯಮಯವಾಗಿದೆ. ಐಡೆನ್ ಮಾರ್ಕ್ರಾಮ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

Recent Articles

spot_img

Related Stories

Share via
Copy link