ಬೆಂಗಳೂರು:
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಜೂನ್ 13 ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ತನ್ನ ಪಾಲಿನ ಮೂರು ಸ್ಥಾನಗಳಿಗೆ ವಿಧಾನಪರಿಷತ್‌ನ ಹಾಲಿ ಸದಸ್ಯ ಎನ್.ರವಿಕುಮಾರ್, ಸಂಸದೆ ಸುಮಲತಾ ಮತ್ತು ಪ್ರೊ.ಎಂ.ನಾಗರಾಜ್ ಅವರನ್ನು ಸಂಭಾವ್ಯ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಯಾದ ಹಿನ್ನೆಲೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಬಂಪರ್ ಆಫರ್ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಮೂರು ಸ್ಥಾನಗಳಿಗೆ ಬಿಜೆಪಿಯಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸುಮಾರು 40 ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ನಳಿನ್‌ಕುಮಾರ್ ಕಟೀಲ್, ಪ್ರತಾಪ ಸಿಂಹ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಸುಮಾರು 15 ಹೆಸರುಗಳನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಲಾಗಿತ್ತು. ಜೂನ್ 01ರಂದು ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.